ನಂಬಿಕೆಯೇ ಬದುಕಿನ ಜೀವಸತ್ವ, ನಂಬಿ ಕರೆದೊಡೆ ಓ ಎನ್ನನೇ ಶಿವನು: ಎಚ್.ಬಿ.ದೇವಣ್ಣ

| Published : Jul 30 2025, 12:45 AM IST

ಸಾರಾಂಶ

ಬದುಕಿನಲ್ಲಿ ಮನುಷ್ಯನಿಗೆ ನಂಬಿಕೆ ಮುಖ್ಯ, ನಂಬಿಕೆ ಇಲ್ಲದ ಮನುಷ್ಯನ ಬದುಕು ದುರ್ಭರವೆನಿಸುತ್ತದೆ. ಪಾರಮಾರ್ಥಿಕ ಪಥದಲ್ಲಿ ನಡೆಯುವವರಿಗೆ ಭಗವಂತನಲ್ಲಿ ನಂಬಿಕೆ ಇರಬೇಕಾಗುತ್ತದೆ. ನಂಬಿಕೆ ಎನ್ನುವುದು ಬದುಕಿಗೆ ಜೀವಸತ್ವ. ಬಲವಾದ ನಂಬಿಕೆಯಿಂದ ಕಲ್ಲು ದೇವರಾಗುತ್ತದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ನಂಬಿಕೆಯೇ ಬದುಕಿನ ಜೀವಸತ್ವ, ನಂಬಿಕೆ ಇದ್ದರೆ ಭಕ್ತಿ ತಾನಾಗಿಯೇ ಬರುತ್ತದೆ. ನಂಬಿ ಕರೆದೊಡೆ ಓ ಎನ್ನನೇ ಶಿವನು ಎಂದು ಬಸವಣ್ಣನವರು ಹೇಳಿದ್ದಾರೆಂದು ಎಂದು ಎಚ್.ಬಿ. ದೇವಣ್ಣ ಹೇಳಿದರು.

ಶ್ರೀ ಕ್ಷೇತ್ರದಲ್ಲಿ ಶ್ರಾವಣಮಾಸದ 5ನೇ ದಿನದ ಪ್ರವಚನ ನೀಡಿದ ಅವರು, ಬದುಕಿನಲ್ಲಿ ಮನುಷ್ಯನಿಗೆ ನಂಬಿಕೆ ಮುಖ್ಯ, ನಂಬಿಕೆ ಇಲ್ಲದ ಮನುಷ್ಯನ ಬದುಕು ದುರ್ಭರವೆನಿಸುತ್ತದೆ. ಪಾರಮಾರ್ಥಿಕ ಪಥದಲ್ಲಿ ನಡೆಯುವವರಿಗೆ ಭಗವಂತನಲ್ಲಿ ನಂಬಿಕೆ ಇರಬೇಕಾಗುತ್ತದೆ. ನಂಬಿಕೆ ಎನ್ನುವುದು ಬದುಕಿಗೆ ಜೀವಸತ್ವ. ಬಲವಾದ ನಂಬಿಕೆಯಿಂದ ಕಲ್ಲು ದೇವರಾಗುತ್ತದೆ. ನಂಬದಿದ್ದರೆ ದೇವರು ಕಲ್ಲಾಗುತ್ತಾನೆ. ಜ್ಞಾನ, ಶ್ರದ್ಧೆ ಇಲ್ಲದಿರುವಾಗ ಸಂಶಯ ಬೆಳೆಯುತ್ತದೆ. ಅದು ಮನಸ್ಸನ್ನು ಆಕ್ರಮಿಸಿ ಚಿತ್ತವನ್ನು ತಲುಪುತ್ತದೆ. ಮನಸ್ಸಿಗೆ ಬಂದ ಸಂಶಯದಿಂದ ಪರಿಹಾರವಿಲ್ಲ. ಅಂಥವರಿಗೆ ಇಹವೂ ಇಲ್ಲ, ಪರವೂ ಇಲ್ಲ, ನೆಮ್ಮದಿಯೂ ಇಲ್ಲ. ಯಾವುದಾದರು ಒಂದನ್ನು ನಂಬಬೇಕು ಆಗ ಮನಸ್ಸಿಗೆ ಶಾಂತಿ ಸಿಗುತ್ತದೆ. ಆ ನಂಬಿಕೆಯೇ ಧೈರ್ಯ, ಧೈರ್ಯವೇ ಸಂತೋಷಕ್ಕೆ ಕಾರಣ ಎಂದರು.

ಡಿ.ವಿ.ಜಿ. ಅವರು ಮಂಕುತಿಮ್ಮನ ಕಗ್ಗದಲ್ಲಿ ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ, ನಂಬಿಯುಂ ನಂಬದಿರುವಿಬ್ಬಂದಿ ನೀನು, ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು, ಸಿಂಬಳದಿ ನೊಣ ನೀನು ಮಂಕುತಿಮ್ಮ ಎಂದು ಹೇಳುತ್ತಾರೆ. ಹಿರಣ್ಯಕಶಪು ತಾನೇ ಸರ್ವಸಮರ್ಥ ಜಗತ್ತನ್ನು ಆಳುವವನು ಎಂದು ನಂಬಿದ್ದವನು. ತನಗಿಂತ ದೊಡ್ಡವರು ಯಾರೂ ಇಲ್ಲ ಎನ್ನುವುದು ಅವನ ಖಚಿತ ನಂಬಿಕೆಯಾಗಿತ್ತು. ದುರ್ದೈವವೆಂದರೆ ಮಗ ಪ್ರಹ್ಲಾದ ನಾರಾಯಣನನ್ನು ಅಪಾರವಾಗಿ ನಂಬಿದವ. ಅವನೇ ಜಗದಾದಿದೈವ ಎಂಬುದು ಅವನ ನಂಬಿಕೆಯಾಗಿತ್ತು ಎಂದು ತಿಳಿಸಿದರು.

ತಂದೆ, ಮಗ ಇಬ್ಬರೂ ತಮ್ಮ ತಮ್ಮ ನಂಬಿಕೆಗಳಿಗೆ ಅಂಟಿಕೊಂಡವರು. ಅವರ ನಂಬಿಕೆಗಳ ನಡುವೆ ತಾಕಲಾಟ ಬಂದಾಗ ಕಂಬವನ್ನು ಒಡೆದು ಹೊರಬಂದ ನರಸಿಂಹ ಹಿರಣ್ಯಕಶಪುವಿಗೆ ಮೊಕ್ಷವನ್ನು, ಪ್ರಹ್ಲಾದನಿಗೆ ದರ್ಶನವಿತ್ತು ಮುಕ್ತಿಯನ್ನು ದಯಪಾಲಿಸಿದ. ಮುಕ್ತಿ ಬಂಧನವಿಲ್ಲದ ಸ್ಥಿತಿ. ಅಂತಹ ಮುಕ್ತಿಯನ್ನು ಪಡೆಯಬೇಕಾದರೆ ಪರಮಾತ್ಮನಲ್ಲಿ, ಗುರು, ಲಿಂಗ, ಜಂಗಮರಲ್ಲಿ,ಶಿವಶರಣರಲ್ಲಿ ಪರಿಪೂರ್ಣ ನಿಸ್ಸಂಶಯವಾದ ಹಾಗೂ ಅನನ್ಯವಾದ ಭಕ್ತಿಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸು ಇದ್ದರು.