ಭಕ್ತಿಗೆ ಭಯ ಮೂಲವಾಗದೆ ಶ್ರದ್ಧೆ ಮೂಲವಾಗಬೇಕು

| Published : Jul 11 2025, 12:32 AM IST

ಭಕ್ತಿಗೆ ಭಯ ಮೂಲವಾಗದೆ ಶ್ರದ್ಧೆ ಮೂಲವಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

1) ಗುರುಪೂರ್ಣಿಮೆ ಸಂದರ್ಭದಲ್ಲಿ ಸಿರಿಗೆರೆಯಲ್ಲಿ ತರಳಬಾಳು ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಈಗೀಗ ಭಕ್ತಿಯಲ್ಲಿ ಭಯ ಮಿಶ್ರಿತವಾದಂತೆ ಕಾಣುತ್ತಿದೆ. ಭಯವನ್ನು ಮೂಲವಾಗಿಟ್ಟುಕೊಂಡು ಮಾಡುವ ಭಕ್ತಿಗೆ ಅರ್ಥ ಇರುವುದಿಲ್ಲ. ಭಕ್ತಿಗೆ ನಮ್ಮೊಳಗಿನ ಶ್ರದ್ಧೆಗಳೇ ಮೂಲವಾಗಬೇಕು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಸಿರಿಗೆರೆಯ ಗುರುಶಾಂತರಾಜ ದಾಸೋಹ ಮಂಟಪದಲ್ಲಿ ತರಳಬಾಳು ಪ್ರಾಥಮಿಕ ಮತ್ತು ತರಳಬಾಳು ಸಿಬಿಎಸ್‌ಸಿ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀಗಳ ಪಾದಪೂಜೆ ಮತ್ತು ಅಕ್ಷರಾಭ್ಯಾಸ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪುರಾತನರ ಕಾಲದಿಂದಲೂ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಧಾರ್ಮಿಕ ನೆಲೆಯಲ್ಲಿ ಮಾಡಿಸುವ ಸಂಪ್ರದಾಯ ಇದೆ. ಗುರು ಪೂರ್ಣಿಮೆಯ ವೇಳೆ ಅಂತಹ ಕೆಲಸ ಮಾಡುತ್ತಿರುವುದು ಸಂತೋಷ. ಗುರುಪೂರ್ಣಿಮೆಗೆ ಭಾರತೀಯ ಪರಂಪರೆಯಲ್ಲಿ ವಿಶೇಷವಾದ ಸ್ಥಾನವಿದೆ. ಗುರುವನ್ನು ಗೌರವಿಸುವ ಮಹತ್ವದದ ಕೆಲಸ ಜಗತ್ತಿನಾದ್ಯಂತ ನಡೆಯುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಕಾವಿ ಬಟ್ಟೆ ಧರಿಸಿದವರೇ ಗುರುವಾಗಬೇಕೆಂಬುದೇನಿಲ್ಲ. ಮಕ್ಕಳ ಮನಸ್ಸನ್ನು ಅರಳಿಸಿ ಅವರ ಪುರೋಭಿವೃದ್ಧಿಗೆ ಕಾರಣರಾಗುವ ಎಲ್ಲಾ ವ್ಯಕ್ತಿಗಳೂ ಸಹ ಗುರುಗಳೇ ಆಗಿರುತ್ತಾರೆ ಎಂದು ಶ್ರೀಗಳು ತಿಳಿಸಿದರು.

ಮುಗ್ದ ಮನಸ್ಸಿನ ಮಕ್ಕಳಿಗೆ ತಮ್ಮ ತರಗತಿ ಮಿಸ್‌ಗಳ ಮೇಲೆ ಅಪಾರ ವಿಶ್ವಾಸ. ಅವರ ಮಾತುಗಳಲ್ಲಿ ಅವರಿಗೆ ನಂಬಿಕೆ ಬಲವಾಗಿ ಬೇರೂರಿರುತ್ತದೆ. ಕೆಲವು ಸಂದರ್ಭಗಲ್ಲಿ ಅವರು ತಪ್ಪು ಹೇಳಿದ್ದರೂ ಸರಿಪಡಿಸುವ ಪೋಷಕರ ಮಾತುಗಳಲ್ಲಿ ಅವರಿಗೆ ನಂಬಿಕೆ ಬರುವುದಿಲ್ಲ. ಆದ್ದರಿಂದ ಮಕ್ಕಳನ್ನು ಶಿಕ್ಷಕರು ಸರಿಯಾದ ದಾರಿಯಲ್ಲಿ, ಕರೆದೊಯ್ಯಬೇಕು ಎಂದರು.

ಹಿಂದೆ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಾಂಪ್ರದಾಯಿಕವಾಗಿ ನಡೆಸಲಾಗುತ್ತಿತ್ತು. ಬಳಪವನ್ನು ಬಳಸಿ ಸ್ಲೇಟಿನ ಮೇಲೆ ಈಗ ಅಕ್ಷರಾಭ್ಯಾಸ ಮಾಡಿಸಿದೆವು. ಆದರೆ ಶಾಲೆಗಳು ಈಗ ತಾಂತ್ರಿಕವಾಗಿ ಮುನ್ನಡೆ ಸಾಧಿಸಿದ್ದು ಮಕ್ಕಳು ಟ್ಯಾಬ್‌ಗಳನು ಬಳಸಿ ಪಾಠ ಕೇಳುವ ದಿನಮಾನಕ್ಕೆ ಬಂದಿದ್ದಾರೆ ಎಂದರು.

ಗುರುಪೂರ್ಣಿಮೆ ಅಂಗವಾಗಿ ಶಾಲಾ ಆವರಣದಲ್ಲಿ ಬೆಳಿಗಿನಿಂದ ಹಲವು ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳು ತಮ್ಮ ಪೋಷಕರು ಪಾದಪೂಜೆ ನೆರವೇರಿಸಿ ಧನ್ಯತೆಯನ್ನು ಕಂಡರು.

ಕಾರ್ಯಕ್ರಮದಲ್ಲಿ ತರಳಬಾಳು ಪ್ರೈಮರಿ ಶಾಲೆ ಮುಖ್ಯಸ್ಥೆ ಎಂ.ಎನ್.‌ಶಾಂತಾ, ತರಳಬಾಳು ಸಿಬಿಎಸ್‌ಸಿ ಶಾಲೆ ಮುಖ್ಯಸ್ಥ ದಿಲೀಪ್‌, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.‌ ಮರುಳಸಿದ್ಧಯ್ಯ, ಶಾಲಾ ಕಾಲೇಜು ಮುಖ್ಯಸ್ಥರುಗಳಾದ ಶಿವನಗೌಡ ಸುರಕೋಡ, ಕೆ.ಇ. ಬಸವರಾಜಪ್ಪ, ಎ.ಬಿ. ಮಂಜುನಾಥ್‌, ಪ್ರೊ. ಶಿವಬಸವ, ಎಂ.ಎಸ್.‌ ಸೋಮಶೇಖರ್‌, ಶಿಕ್ಷಕರು, ಪೋಷಕರು ಸೇರಿದಂತೆ ಸಾವಿರಾರು ಮಕ್ಕಳು ಭಾಗಿಯಾಗಿದ್ದರು.

ಕಿಕ್ಕಿರಿದು ಸೇರಿದ್ದ ಪೋಷಕರು

ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದ ಊರುಗಳಿಂದಲೂ ಮಕ್ಕಳ ಪೋಷಕರು ಆಗಮಿಸಿದ್ದರು. ಗುರುಶಾಂತರಾಜ ದಾಸೋಹ ಮಂಟಪ ಮಕ್ಕಳು ಮತ್ತು ಪೋಷಕರಿಂದ ಗಿಜಿಗುಡುತ್ತಿತ್ತು. ಆನಂದದಿಂದ ನಲಿದಾಡುತ್ತಿದ್ದ ಮಕ್ಕಳು ತಮ್ಮ ಪೋಷಕರನ್ನು ಸಾಲಾಗಿ ಕುಳ್ಳಿರಿಸಿ ಅವರ ಪಾದಗಳಿಗೆ ಪೂಜೆ ಸಲ್ಲಿಸಿ ಧನ್ಯತೆಯನ್ನು ತುಂಬಿಕೊಡರು. ಈ ವೇಳೆ ಹಲವು ಮಕ್ಕಳ ಕಣ್ಣಂಚಿನಲ್ಲಿ ಆನಂದಬಾಷ್ಪ ತುಂಬಿಕೊಂಡಿದ್ದವು.

ಅವ್ಯಕ್ತ ಸಂತಸ ಅನುಭವಿಸಿದ ಪೋಷಕರು

ಶ್ರೀಗಳು ನೂರಾರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದು ವಿಶೇಷವಾಗಿತ್ತು. ಸ್ಲೇಟು ಮತ್ತು ಬಳಪ ಹಿಡಿದ ಪುಟಾಣಿ ಮಕ್ಕಳು ತಮ್ಮ ಪೋಷಕರೊಡಗೂಡಿ ಸರದಿಯಲ್ಲಿ ತೆರಳುತ್ತಿದ್ದರು. ಬಳಪ ಹಿಡಿದಿದ್ದ ಮಕ್ಕಳ ಕೈಹಿಡಿದು ಶ್ರೀಗಳು ಓಂ, ಅ,ಆ ಮತ್ತು ಮಕ್ಕಳ ಹೆಸರಿನ ಮೊದಲ ಅಕ್ಷರ ಬರೆಸಿದರು. ಶ್ರೀಗಳ ಬಳಿ ನಿಂತು ಮಕ್ಕಳು ಬರೆಯುವುದನ್ನು ಪೋಷಕರು ತನ್ಮಯತೆಯಿಂದ ವೀಕ್ಷಿಸಿದರು. ಆಗ ಸಾಲು ಸಾಲು ಪೋಟೋಗಳನ್ನು ಪೋಟೋಗಳನ್ನು ಪೋಷಕರು ಸೆರೆ ಹಿಡಿದರು.