ಧಾರವಾಡ ಹೈಕೋರ್ಟ್ ಪೀಠದಲ್ಲಿ ಬಾಂಬ್‌ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಹಿನ್ನೆಲೆ ಹೈಕೋರ್ಟ್ ಆವರಣವನ್ನು ಎರಡ್ಮೂರು ತಪಾಸಣೆ ಮಾಡಲಾಯಿತು. ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿಯುತ್ತಿದ್ದಂತೆ, ವಕೀಲರು, ಸಾರ್ವಜನಿಕರು ನಿಟ್ಟುಸಿರುವ ಬಿಟ್ಟರು.

ಧಾರವಾಡ:

ಇಲ್ಲಿಯ ಹೈಕೋರ್ಟ್ ಪೀಠದಲ್ಲಿ ಬಾಂಬ್‌ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಹಿನ್ನೆಲೆ ಹೈಕೋರ್ಟ್ ಆವರಣವನ್ನು ಎರಡ್ಮೂರು ಗಂಟೆಗಳ ತಪಾಸಣೆ ಮಾಡಲಾಯಿತು. ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿಯುತ್ತಿದ್ದಂತೆ, ವಕೀಲರು, ಸಾರ್ವಜನಿಕರು ನಿಟ್ಟುಸಿರುವ ಬಿಟ್ಟರು.

ಮಂಗಳವಾರ ಬೆಳಗ್ಗೆ ಹೈಕೋರ್ಟ್‌ನ ಹೆಚ್ಚುವರಿ ರಜಿಸ್ಟ್ರಾರ್‌ ಜನರಲ್‌ ಅವರಿಗೆ ಅಪರಿಚಿತರಿಂದ ಬಂದಿದ್ದ ಇ-ಮೇಲ್‌ನಲ್ಲಿ ಮಧ್ಯಾಹ್ನ 1.55ರೊಳಗೆ ಇಡೀ ನ್ಯಾಯಾಲಯದ ಆವರಣ ಖಾಲಿ ಮಾಡಬೇಕು. ಅಲ್ಲದೇ ಆತ್ಮಾಹುತಿ ಬಾಂಬರ್ ಮೂಲಕ ಸ್ಫೋಟಿಸುವುದಾಗಿಯೂ ಬೆದರಿಸಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಹೆಚ್ಚುವರಿ ರಜಿಸ್ಟ್ರಾರ್‌ ಜನರಲ್‌ ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳೊಂದಿಗೆ ಆಗಮಿಸಿದ ಎಸ್ಪಿ ಗುಂಜನ್ ಆರ್ಯ, ಎಲ್ಲ ಬಗೆಯ ತಪಾಸಣೆ ನಡೆಸಿದರು. ಇದೇ ವೇಳೆ ತಮ್ಮ ತಂಡದೊಂದಿಗೆ ನ್ಯಾಯಮೂರ್ತಿಗಳನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯಲಾಯಿತು. ಇನ್ನೊಂದೆಡೆ ಶ್ವಾನ ದಳದ ಸಿಬ್ಬಂದಿ ಕೂಡ ನ್ಯಾಯಾಲಯದ ಇಂಚಿಂಚು ಜಾಗೆಯನ್ನು ಪರೀಕ್ಷಿಸಿದರು. ಈ ದಿಢೀರ್‌ ಬೆಳವಣಿಗೆ ಕಂಡು ವಕೀಲರು, ಸಾರ್ವಜನಿಕರು ಚಕಿತರಾದರು. ಬಳಿಕ ಹೈಕೋರ್ಟ್‌ನಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸುದ್ದಿ ತಿಳಿದು ಆತಂಕಕ್ಕೆ ಒಳಗಾದರು. ಬಳಿಕ ಪೊಲೀಸರ ಸೂಚನೆ ಮೇರೆಗೆ ಹೈಕೋರ್ಟ್‌ ಗೇಟ್‌ನ ಹೊರಗೆ ಹೋದರು.

ಮಧ್ಯಾಹ್ನ ಕಲಾಪ ಶುರು:

ಎರಡು ಗಂಟೆ ತೀವ್ರ ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂದಾಗ ಹೈಕೋರ್ಟ್‌ ಹೆಚ್ಚುವರಿ ರಜಿಸ್ಟ್ರಾರ್ ಜನರಲ್ ಅವರು ಪೊಲೀಸರೊಂದಿಗೆ ಚರ್ಚಿಸಿ ಮಧ್ಯಾಹ್ನದ ನಂತರ ಕಲಾಪ ಆರಂಭಿಸಲು ನಿರ್ಧರಿಸಿದರು. ಬಳಿಕ ಎಲ್ಲರನ್ನು ಪರೀಕ್ಷಿಸಿ ನ್ಯಾಯಾಲಯದ ಆವರಣದ ಒಳಗಡೆ ಬಿಡಲಾಯಿತು.

ಹೆಚ್ಚಿನ ಭದ್ರತೆ ಒದಗಿಸಿ:

ನ್ಯಾಯಾಲಯದಲ್ಲಿ ಕಡಿಮೆ ಭದ್ರತಾ ಸಿಬ್ಬಂದಿ ಇದ್ದು ಇಂತಹ ಹುಸಿ ಕರೆಗಳು ಬರುತ್ತಿವೆ. ಆದರಿಂದ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸುವ ಕುರಿತು ಗೃಹಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಮಾಡಲಾಗುವುದು ಎಂದು ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ತಿಳಿಸಿದರು.ಹೈಕೋರ್ಟ್‌ನಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಎರಡ್ಮೂರು ಹಂತದಲ್ಲಿ ಹೈಕೋರ್ಟ್‌ನಲ್ಲಿ ತಪಾಸಣೆ ಮಾಡಲಾಯಿತು. ಇ-ಮೇಲ್‌ ತಮಿಳುನಾಡಿನಿಂದ ಬಂದಿರುವ ಶಂಕೆ ಇದ್ದು ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗುವುದು.

ಗುಂಜನ್‌ ಆರ್ಯ, ಎಸ್ಪಿಬಾಂಬ್ ಇಟ್ಟಿರುವ ಇ-ಮೇಲ್‌ ಮಂಗಳವಾರ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ತಿಳಿಸಿ ಕಲಾಪ ಸ್ಥಗಿತಗೊಳಿಸಲಾಯಿತು. ತಪಾಸಣೆ ಬಳಿಕ ಅದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿಯಿತು. ಪೊಲೀಸರೊಂದಿಗೆ ಚರ್ಚಿಸಿ ಮಧ್ಯಾಹ್ನದ ನಂತರ ಮತ್ತೆ ಕಲಾಪ ಆರಂಭಿಸಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಾಂತವೀರ ಶಾಂತಪ್ಪ, ಹೈಕೋರ್ಟ್‌ ಹೆಚ್ಚುವರಿ ರಜಿಸ್ಟ್ರಾರ್‌