ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಶಾಸಕ ಕೊತ್ತೂರು ಬಂಧನಕ್ಕೆ ಒತ್ತಾಯ

| Published : Jan 16 2025, 12:47 AM IST

ಸಾರಾಂಶ

ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕನಾಗಿ ಆಯ್ಕೆಯಾಗಿ ಅಧಿಕಾರ ಪಡೆದಿದ್ದ ಕೊತ್ತೂರು ಮಂಜುನಾಥ್ ಇಡೀ ಪರಿಶಿಷ್ಟ ಜನಾಂಗಕ್ಕೆ ಮಾಡಿರುವ ವಂಚನೆಯಾಗಿದೆ. ಇವರ ವಿರುದ್ಧ ನ್ಯಾಯಾಲಯದಲ್ಲೂ ರುಜುವಾತಾಗಿ ತೀರ್ಪು ನೀಡಿದೆ. ಆದ್ದರಿಂದ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಸರ್ಕಾರವು ಕೂಡಲೇ ಅಟ್ರಾಸಿಟಿ ಹಾಕಿ ಬಂಧಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಕಳೆದ ೨೦೧೩ರಿಂದ ೨೦೧೮ರವರೆಗೆ ಮುಳಬಾಗಿಲು ವಿಧಾನಸಭಾದ ಮೀಸಲು ಕ್ಷೇತ್ರದ ಅಧಿಕಾರ ಅನುಭವಿಸುವ ಮೂಲಕ ವಂಚಿಸಿರುವ ಕೋಲಾರದ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಆಡಳಿತಾರೂಢ ರಾಜ್ಯ ಸರ್ಕಾರವು ಆರೋಪಿ ಕೊತ್ತೂರು ಜಿ.ಮಂಜುನಾಥ್‌ರನ್ನು ಬಂಧಿಸದೇ ಮೀನಮೇಷ ಎಣಿಸುತ್ತಿರುವುದನ್ನು ಖಂಡಿಸಿ ಜ.೨೨ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಹೂಹಳ್ಳಿ ಪ್ರಕಾಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ಪ್ರಮಾಣಪತ್ರ ಸಲ್ಲಿಸಿ ನಕಲಿ ಶಾಸಕರಾದವರಿಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಕಳೆದ ೨೦೨೩ರಿಂದ ನಿರಂತರವಾಗಿ ದಲಿತ ಸಂಘಟನೆಗಳು ನಕಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಹೋರಾಟ ಮುಂದುವರಿಸಿಕೊಂಡು ಬಂದಿವೆ. ಕಾನೂನು ಹೋರಾಟದಲ್ಲಿಯೂ ನಕಲಿ ಶಾಸಕರ ಪರ ತೀರ್ಪು ಬಂದಿಲ್ಲ. ಶಾಸಕ ಕೊತ್ತೂರು ಮಂಜುನಾಥ್ ಬೈರಾಗಿ ಜನಾಂಗದವರು, ನಕಲಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣಾ ಆಯೋಗಕ್ಕೆ ವಂಚಿಸಿ, ಮೀಸಲಾತಿ ಅವಕಾಶ ಪಡೆದು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾಗಿ ಅಧಿಕಾರ ದುರ್ಬಳಸಿಕೊಂಡಿದ್ದಾರೆ ಎಂದು ದೂರಿದರು.

ಕೊತ್ತೂರು ಮಂಜುನಾಥ್‌ರಿಗೆ ಆತ್ಮಗೌರವ ಇದ್ದಲ್ಲಿ ಕೂಡಲೇ ರಾಜೀನಾಮೆ ನೀಡಬೇಕು, ಮುಖ್ಯ ನ್ಯಾಯಾಧೀಶ ಎಂ.ನಾಗಪ್ರಸನ್ನ ಅವರು ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ, ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ಶಾಸಕ ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆಂದು ಘೋಷಿಸಿದ್ದಾರೆ. ಜಾತಿ ಕದ್ದಿರುವ ವಂಚಕರಾಗಿರುವ ಇವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳದೆ ಮುಖ್ಯಮಂತ್ರಿಗಳು ತಮ್ಮ ಜೊತೆಯಲ್ಲಿಟ್ಟುಕೊಂಡಿರುವುದು ಶೋಭೆ ತರುವುದಿಲ್ಲ, ಕ್ರಿಮಿನಲ್ ಆರೋಪಿಯಾಗಿರುವ ಕೊತ್ತೂರು ಮಂಜುನಾಥ್‌ರನ್ನು ಬಂಧಿಸುವವರೆಗೂ ನಮ್ಮ ನಿರಂತರ ಹೋರಾಟ ಮುಂದುವರಿಯುವುದಾಗಿ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಶಾಸಕರ ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸಂವಿಧಾನ ಬದ್ಧವಾಗಿದೆ ಎಂದ ಅವರು, ಶಾಸಕ ಮಂಜುನಾಥ್‌ರಿಗೆ ಕ್ರಿಮಿನಲ್ ಅಟ್ರಾಸಿಟಿ ಕಾಯ್ದೆಗಳ ಬಗ್ಗೆ ಕನಿಷ್ಠ ಅರಿವು ಇದೆಯೇ? ಅವರಿಗೆ ರಾಜಕಾರಣದಲ್ಲಿ ನೈತಿಕತೆಯಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು.

ಒಕ್ಕೂಟದ ನೇತೃತ್ವದಲ್ಲಿ ಹಲವಾರು ದಲಿತ ಸಂಘಟನೆಗಳೊಂದಿಗೆ ನಗರದ ಬಂಗಾರಪೇಟೆಯ ಅಂಬೇಡ್ಕರ್ ವೃತ್ತದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ಸುಮಾರು ೫ ಸಾವಿರ ಮಂದಿ ಸಂಘಟಿತರಾಗುವ ನಿರೀಕ್ಷೆ ಇದೆ, ನಂತರದಲ್ಲಿ ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಸಿ ನಕಲಿ ಜಾತಿ ಪ್ರಮಾಣ ಪತ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ ಮಾಡುವುದಾಗಿ ತಿಳಿಸಿದರು.

ಮುಖಂಡ ದಲಿತ ನಾರಾಯಣಸ್ವಾಮಿ ಮಾತನಾಡಿ, ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕನಾಗಿ ಆಯ್ಕೆಯಾಗಿ ಅಧಿಕಾರ ಪಡೆದಿದ್ದ ಕೊತ್ತೂರು ಮಂಜುನಾಥ್ ಇಡೀ ಪರಿಶಿಷ್ಟ ಜನಾಂಗಕ್ಕೆ ಮಾಡಿರುವ ವಂಚನೆಯಾಗಿದೆ. ಇವರ ವಿರುದ್ಧ ನ್ಯಾಯಾಲಯದಲ್ಲೂ ರುಜುವಾತಾಗಿ ತೀರ್ಪು ನೀಡಿದೆ. ಆದ್ದರಿಂದ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಸರ್ಕಾರವು ಕೂಡಲೇ ಅಟ್ರಾಸಿಟಿ ಹಾಕಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘಟನೆಯ ಮುಖಂಡರಾದ ವೆಂಕಟೇಶ್, ಚಿಕ್ಕ ನಾರಾಯಣಪ್ಪ, ಅನಂತ ಕೀರ್ತಿ, ಮೆಕ್ಯಾನಿಕ್ ಶ್ರೀನಿವಾಸ್, ಹಾರೋಹಳ್ಳಿ ಮಂಜುನಾಥ್, ಸಾಹುಕಾರ್ ಶಂಕರಪ್ಪ, ಅಂಬರೀಷ್, ವಿನಯ್, ಮಂಜುನಾಥ್, ಶ್ರೀನಿವಾಸ್, ಹಾರೋಹಳ್ಳಿ ರವಿ ಇದ್ದರು.