ಸುಳ್ಳು ಜಾತಿ ಪ್ರಮಾಣ ಪತ್ರ: 2ರಂದು ಪ್ರತಿಭಟನೆ

| Published : Aug 31 2024, 01:40 AM IST

ಸಾರಾಂಶ

ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ನಾಯಕ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೆ.2 ರಂದು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ನಾಯಕ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೆ.2 ರಂದು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂವಿಧಾನದಡಿ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ನಾಯಕ ಜನಾಂಗದವರಿಗೆ ಮೀಸಲಾತಿ ಅಡಿ ನ್ಯಾಯ ಒದಗಿಸಲಾಗಿದೆ. ಆದರೂ ಈ ಸಮುದಾಯದ ಮೇಲೆ ನಿರಂತರವಾಗಿ ಶೋಷಣೆ, ದೌರ್ಜನ್ಯ, ಮೀಸಲಾತಿ ವಂಚನೆ ಪ್ರಕರಣಗಳು ನಡೆಯುತ್ತಿರುವುದು ಖಂಡನಾರ್ಹ ಎಂದರು.

ವಾಲ್ಮೀಕ ನಾಯಕ ಸಮಾಜಕ್ಕೆ ಸೇರಿದ ಕೆಲವು ಸಮುದಾಯದ ವ್ಯಕ್ತಿ ಗಳು ತಳವಾರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ನಕಲಿ ಪ್ರಮಾಣ ಪತ್ರದ ಮೂಲಕವೇ ಉದ್ಯೋಗ, ಬಡ್ತಿ ಹಾಗೂ ಶೈಕ್ಷಣಿಕ ಸೌಲಭ್ಯ ಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ದೂರಿದರು.

ಇಂತಹ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ನಿಜವಾದ ನಾಯಕ ಸಮುದಾಯದವರಿಗೆ ಸಿಗಬೇಕಾದ ಮೀಸಲು ಸೌಲಭ್ಯ ಕಸಿದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಹಾಗಂತ ಸುಮ್ಮನೆ ಕುಳಿತರೆ ನಮ್ಮ ಸಮುದಾಯಕ್ಕೆ ತೀರಾ ಅನ್ಯಾಯವಾಗಲಿದೆ. ನಕಲಿ ಜಾತಿ ಪ್ರಮಾಣ ಪತ್ರ ನೀಡಿಕೆ ತಪ್ಪಿಸಲು ಆಗ್ರಹಿಸಿ ಸೆ.2 ರಂದು ಪರಿಶಿಷ್ಟ ಪಂಗಡದಲ್ಲಿನ ಎಲ್ಲ ಮುಖಂಡರು ಧರಣಿ ಹಮ್ಮಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಂಭುಗೌಡ ಪಾಟೀಲ, ರಾಜು ನಾಯ್ಕರ್ ಇದ್ದರು.