ಡೇರಿ ನಿರ್ದೇಶಕ ಸ್ಥಾನಕ್ಕಾಗಿ ನಕಲಿ ದಾಖಲೆ ಸೃಷ್ಟಿ

| Published : Apr 24 2025, 11:46 PM IST

ಸಾರಾಂಶ

ಹಾಲು ಒಕ್ಕೂಟದಲ್ಲಿ ಅವ್ಯವಹಾರ ನಿಯಂತ್ರಿಸಲು ಹಾಗೂ ಬೆಳಕಿಗೆ ತರಲು ನಾನೇ ಹಾಲು ಒಕ್ಕೂಟವನ್ನು ಪ್ರವೇಶಿಸುತ್ತೇನೆಂದು ಹೇಳಿಕೊಂಡು ಅಕ್ರಮವಾಗಿ ಸದಸ್ಯತ್ವ ಪಡೆದಿದ್ದಾರೆ, ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ, ನೀತಿ, ನಿಯಮಗಳನ್ನು ಪಾಲನೆ ಮಾಡಬೇಕು. ಕ್ಷೇತ್ರದ ಜನಪ್ರತಿನಿಧಿಯದವರು ಜನರಿಗೆ ಮಾದರಿಯಾಗಿರಬೇಕು

ಕನ್ನಡಪ್ರಭ ವಾರ್ತೆ ಕೋಲಾರಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುಂಬರುವ ಕೋಲಾರ ಹಾಲು ಒಕ್ಕೂಟದಲ್ಲಿ ಅಧಿಕಾರ ಗಿಟ್ಟಿಸಬೇಕೆಂದು ಹಾಲು ಉತ್ಪಾದಕರು ಅಲ್ಲದಿದ್ದರೂ ಸಹ ಬಂಗಾರಪೇಟೆ ತಾಲೂಕಿನ ನೆತ್ತಬೆಲೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿರ್ದೇಶಕ ಸ್ಥಾನ ಪಡೆದಿದ್ದಾರೆ. ಇದರ ವಿರುದ್ದ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವುದಾಗಿ ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್.ಪಿ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಲು ಉತ್ಪಾದಕರ ಮಹಾಮಂಡಳಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ತಮ್ಮದೇ ಪಕ್ಷದ ಮಾಲೂರು ಕ್ಷೇತ್ರದ ಶಾಸಕರ ಮೇಲೆ ಆರೋಪಗಳನ್ನು ಮಾಡಿದ್ದಾರೆ ಎಂದರು.

ಹಾಲು ಹಾಕದ ಶಾಸಕ ನಿರ್ದೇಶಕ

ಹಾಲು ಒಕ್ಕೂಟದಲ್ಲಿ ಅವ್ಯವಹಾರ ನಿಯಂತ್ರಿಸಲು ಹಾಗೂ ಬೆಳಕಿಗೆ ತರಲು ನಾನೇ ಹಾಲು ಒಕ್ಕೂಟವನ್ನು ಪ್ರವೇಶಿಸುತ್ತೇನೆಂದು ಹೇಳಿಕೊಂಡು ಅಕ್ರಮವಾಗಿ ಸದಸ್ಯತ್ವ ಪಡೆದಿದ್ದಾರೆ, ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ, ನೀತಿ, ನಿಯಮಗಳನ್ನು ಪಾಲನೆ ಮಾಡಬೇಕು. ಕ್ಷೇತ್ರದ ಜನಪ್ರತಿನಿಧಿಯದವರು ಜನರಿಗೆ ಮಾದರಿಯಾಗಿರಬೇಕು. ಆದರೆ ತಾನು ಹಾಲು ಉತ್ಪಾದಕರಲ್ಲದ, ಯಾವ ಡೇರಿಗೂ ಒಂದು ಲೀಟರ್ ಹಾಲು ಹಾಕದ ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸದಸ್ಯತ್ವ ಪಡೆದಿದ್ದಾರೆ ಎಂದು ಆರೋಪಿಸಿದರು. ಹಾಲು ಉತ್ಪಾದಕರಾದ ರಾಜಪ್ಪ, ನರಸಿಂಹಪ್ಪ ಶಾಸಕರ ಅಕ್ರಮ ಸದಸ್ಯತ್ವ ವಿರುದ್ದ ದೂರು ನೀಡಿರುವುದಕ್ಕೆ ಅವರ ವಿರುದ್ದ ಅಧಿಕಾರ ದುರ್‍ಬಳಿಸಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ಅಮಾಯಕರನ್ನು ಬೆದರಿಸಿ ದೂರನ್ನು ವಾಪಸ್‌ ಪಡೆಯುವಂತೆ ಮಾಡಿದ್ದಾರೆ, ಸಂಘದಲ್ಲಿ ಷೇರು ಹೊಂದಿಲ್ಲ

ಸಂಘದಲ್ಲಿ ನಿಗದಿತ ಸದಸ್ಯರಗಿಂತ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಕೊಳ್ಳಲು ಯಾವುದೇ ಅನುಮತಿ ಪಡೆದಿಲ್ಲ, ಒಂದು ಶೇರು ಹೊಂದಿಲ್ಲ, ಇವರು ಹಾಲು ಉತ್ಪಾದಕರು ಎಂಬುವುದಕ್ಕೆ ಯಾವುದೇ ದಾಖಲೆಗಳಿಲ್ಲದಿದ್ದರೂ ಸಹ ಅಕ್ರಮವಾಗಿ ವಾಮ ಮಾರ್ಗ ಬಳಸಿಕೊಂಡು ಸದಸ್ಯತ್ವ ಪಡೆದಿದ್ದಾರೆ, ಶಾಸಕರ ಅಕ್ರಮಗಳಿಗೆ ಸಹಕಾರ ನೀಡಿದಂತ ಅಧಿಕಾರಿಗಳ ವಿರುದ್ದವೂ ಕಾನೂನು ಸಮರ ಸಾರಲಾಗುವುದು ಎಂದರು. ಶಾಸಕರ ತುಘಲಕ್ ದರ್ಬಾರ್

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬುವುದಕ್ಕೆ ಹಾಲಿನ ಸಂಘದಲ್ಲಿ ಅಕ್ರಮವಾಗಿ ಸದಸ್ಯತ್ವ ಪಡೆದಿರುವುದೇ ನಿದರ್ಶನವಾಗಿದೆ. ಅಧಿಕಾರಿಗಳನ್ನು ಏಜೆಂಟರಂತೆ ಪರಿವರ್ತಿಸಿಕೊಂಡಿದ್ದಾರೆ. ಸರ್ಕಾರಿ ವಾಹನಗಳನ್ನು ಚುನಾವಣೆಯಲ್ಲಿ ಮತದಾರರನ್ನು ಕರೆದುಕೊಂಡು ಬರಲು ದುರ್ಬಳಿಸುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯರ ಆಡಳಿತದಲ್ಲಿ ಒಂದು ಸಮುದಾಯಕ್ಕೆ ತುಷ್ಟೀಕರಣಗೊಳಿಸಲು ಸಾಮಾಜಿಕ ನ್ಯಾಯವನ್ನೇ ಗಾಳಿಗೆ ತೂರಿದೆ ಎಂದರು. .ಗಾಲ್ಫ ಕ್ಲಬ್‌ಗೆ ಹೊಂದಿ ಕೊಂಡಿರುವ ಜಮೀನು ನಿವೃತ್ತ ಶಿಕ್ಷಕ ಕೊಡಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಪ್ರಕರಣ ದಾಖಲಿಸುವುದಾಗಿ ಪ್ರಾಣ ಬೆದರಿಕೆ ಸಹ ಹಾಕಿದ್ದರು. ಇದಕ್ಕೆ ಪೊಲೀಸರ ಸಹಕಾರ ಪಡೆದಿದ್ದರು. ಮಾರ್ಕಂಡಯ್ಯಗೆ ನಿರ್ದೇಶಕ ಸ್ಥಾನ ಸಿಗದಂತೆ ದೂರು ದಾಖಲಿಸಿ ಪೊಲೀಸ್ ಅಧಿಕಾರಿಯ ನೆರವಿನಿಂದ ಠಾಣೆಗೆ ಕರೆಸಿಕೊಂಡು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಿದವರು.

ನಕಲಿ ಹಾಲು ಒಚ್ಚೂಟದ ಸರ್ಟಿಫಿಕೆಟ್‌

ಈ ಹಿಂದೆ ಹಾಲು ಒಕ್ಕೂಟದಲ್ಲಿ ಮಕ್ಕಳ ಹಾಲು, ಮೊಸರು, ತುಪ್ಪ ತಿಂದರೆಂದು ಅವರ ಕಾಲೆಳೆದು ಇವರು ಒಕ್ಕೂಟದಲ್ಲಿ ನುಗ್ಗಲು ಅಕ್ರಮವಾದ ರಹದಾರಿಗಳನ್ನು ಹುಡುಕಿಕೊಂಡಿರುವುದು ಸಮಂಜಸವಲ್ಲ ನಕಲಿ ಹಾಲು ಒಕ್ಕಟದ ಉತ್ಪಾದಕನೆಂಬ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ, ರಾಜ್ಯದಲ್ಲಿ ಸರ್ಕಾರ ಎಂಬುವುದು ಜೀವಂತವಾಗಿದೆಯೇ ಎಂಬ ಅನುಮಾನ ಉಂಟಾಗಿದೆ ಎಂದರು.ತಮ್ಮ ಮೇಲೆ ಶಾಸಕ ನಾರಾಯಣಸ್ವಾಮಿ ಮಾಡಿರುವ ಒತ್ತುವರಿ ಆರೋಪಕ್ಕೆ ಯಾವುದೇ ದಾಖಲೆ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಹಾಗೇನಾದರೂ ನಾನು ಯಾವುದಾದರೂ ಒತ್ತುವರಿ ಮಾಡಿಕೊಂಡಿದ್ದರೆ ತೆರವು ಮಾಡಲು ನನ್ನ ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನುಮಣ್ಣ, ವೆಂಕಟೇಶ್, ರಮೇಶ್ ಇದ್ದರು.