46 ಶಾಲಾವಾಹನಗಳಿಗೆ ನಕಲಿ ವಿಮೆ, ಕೋಟ್ಯಂತರ ರು. ವಂಚನೆ: ಇಬ್ಬರ ಬಂಧನ

| Published : Oct 07 2025, 01:03 AM IST

46 ಶಾಲಾವಾಹನಗಳಿಗೆ ನಕಲಿ ವಿಮೆ, ಕೋಟ್ಯಂತರ ರು. ವಂಚನೆ: ಇಬ್ಬರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸುಮಾರು 46ಕ್ಕೂ ಅಧಿಕ ಶಾಲಾ ಕಾಲೇಜುಗಳ ವಾಹನಗಳಿಗೆ ನಕಲಿ ವಿಮೆ ಮಾಡಿ ಕೋಟ್ಯಂತರ ರು. ವಂಚಿಸಿದ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ನಿವಾಸಿ ರಾಕೇಶ್ ಎಸ್. (33) ಮತ್ತು ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಮಾಜಿ ಉದ್ಯೋಗಿ ಚರಣ್ ಬಾಬು ಮೇಸ್ತ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಶಾಲಾ ಮತ್ತು ಕಾಲೇಜು ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿಗಳನ್ನು ವಿತರಿಸುವ ಹಗರಣವೊಂದನ್ನು ಉಡುಪಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸುಮಾರು 46ಕ್ಕೂ ಅಧಿಕ ಶಾಲಾ ಕಾಲೇಜುಗಳ ವಾಹನಗಳಿಗೆ ನಕಲಿ ವಿಮೆ ಮಾಡಿ ಕೋಟ್ಯಂತರ ರು. ವಂಚಿಸಿದ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ನಿವಾಸಿ ರಾಕೇಶ್ ಎಸ್. (33) ಮತ್ತು ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಮಾಜಿ ಉದ್ಯೋಗಿ ಚರಣ್ ಬಾಬು ಮೇಸ್ತ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಇತ್ತೀಚೆಗೆ ಕುಂದಾಪುರ ತಾಲೂಕಿನ ಹುನ್ಸೆಮಕ್ಕಿ ಎಂಬಲ್ಲಿ ಶಾಲಾ ಬಸ್ ಮತ್ತು ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಆಟೋ ಚಾಲಕ ವಿಮೆಯನ್ನು ಪಡೆಯಲು ಹೋದಾಗ, ಶಾಲೆಯವರು ನೀಡಿದ ತಮ್ಮ ವಾಹನದ ವಿಮಾ ದಾಖಲೆಗಳು ನಕಲಿ ಎಂಬುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ವ್ಯವಸ್ಥಾಪಕ ನಿಖಿಲ್ ಜಿ.ಆರ್., ತಮ್ಮ ಸಂಸ್ಥೆಯ ನಕಲಿ ದಾಖಲೆಗಳನ್ನುಸೃಷ್ಟಿಸಿದ ಬಗ್ಗೆ ಕೋಟ ಠಾಣೆಗೆ ದೂರು ಸಲ್ಲಿಸಿದರು. ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಈ ನಕಲಿ ವಿಮೆ ಮಾಡುವ ಹಗರಣ ಬೆಳಕಿಗೆ ಬಂದಿದೆ.ಪ್ರಕರಣದ ಗಂಭೀರತೆ ಪರಿಗಣಿಸಿ ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು.ಅವರು ಉಡುಪಿ ಮತ್ತು ಉ.ಕ. ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ತೆರಳಿ ತಾವು ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಏಜೆಂಟರೆಂದು ಪರಿಚಯಿಸಿಕೊಂಡು ಶಾಲಾ ವಾಹನಗಳಿಗೆ ಹೊಸ ವಿಮೆ ಅಥವಾ ವಿಮೆ ನವೀಕರಣ ಮಾಡುವುದಾಗಿ ಹೇಳಿ, ಪ್ರತಿ ಶಾಲೆ ಕಾಲೇಜುಗಳಿಂದ 4-5 ಲಕ್ಷ ರು.ಗಳ ವಿಮೆ ಮಾಡುವುದಾಗಿ ಹಣ ಪಡೆದುಕೊಂಡು ನಕಲಿ ದಾಖಲೆಗಳನ್ನು ನೀಡುತಿದ್ದಾರೆ. ಅವರು ದ.ಕ. ಜಿಲ್ಲೆಯಲ್ಲಿಯೂ ಈ ವಂಚನೆ ಮಾಡಿದ್ದು, ಹೆಚ್ಚಿನ ವಿವರ ತನಿಖೆಯಿಂದ ತಿಳಿದು ಬರಬೇಕಿದೆ. ಈ ರೀತಿ ವಂಚನೆಗೊಳಗಾದ ಶಾಲಾ ಕಾಲೇಜುಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.