ಸಾರಾಂಶ
ಕನ್ನಡ ಪ್ರಭ ವಾರ್ತೆ ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಜನರಿಗೆ ಸರ್ಕಾರಿ ಯೋಜನೆಯ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ನಕಲಿ ಆದೇಶ ಪ್ರತಿನೀಡಿ ದಂಪತಿಗಳಿಬ್ಬರು ವಂಚಿಸಿರುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಆರೋಪಿಸಿದ್ದಾರೆ.
ಹನೂರು ಪಟ್ಟಣದ ತಾಲೂಕು ದಂಡಾಧಿಕಾರಿಗಳಿಗೆ ವಿವಿಧ ಗ್ರಾಮದ ವಯೋವೃದ್ಧರು ರೈತ ಸಂಘದವರು ನಕಲಿ ಆದೇಶ ಪ್ರತಿ ನೀಡಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡು ಸೂಕ್ತ ಕ್ರಮ ಕೈಗೊಂಡು ವಂಚಿತಗೊಂಡಿರುವ ಪಿಂಚಣಿ ಫಲಾನುಭವಿಗಳಿಗೆ ಸರ್ಕಾರಿ ಸೌಲತ್ತು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಪುರ ಗಂಗನದೊಡ್ಡಿ ಬಸಪ್ಪನ ದೊಡ್ಡಿ ಮಂಚಾಪುರ ವಿವಿಧ ಗ್ರಾಮಗಳಲ್ಲಿ ಅಂಬಿಕಾಪುರ ತೋಟದ ಮನೆಯಲ್ಲಿ ದಂಪತಿಗಳಿಬ್ಬರು ಕಚೇರಿ ತೆರೆದು 2022 ರಲ್ಲಿ ಕೊರೋನಾ ಇದ್ದಂತ ಸಂದರ್ಭದಲ್ಲಿ ಈ ಭಾಗದಲ್ಲಿ ಇರುವ ವಯೋವೃದ್ಧರ ಹಾಗೂ ಪಿಂಚಣಿ ಯೋಜನೆ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಸೌಲಭ್ಯವನ್ನು ಕಲ್ಪಿಸಲು ಪ್ರತಿಯೊಬ್ಬರ ಬಳಿ 6000ರಿಂದ 8000 ಹಣ ವಸೂಲಿ ಮಾಡಿದ್ದಾರೆ.
ಬೆಂಗಳೂರಿನ ಆಡುಗೋಡಿ ವಿಳಾಸವಿರುವ ಪಿಂಚಣಿ ಆದೇಶ ಪ್ರತಿಯನ್ನು ಅವರ ಹೆಸರಿನಲ್ಲಿಯೇ (ಫೇಕ್) ನಕಲಿ ದಾಖಲೆ ಸೃಷ್ಟಿಸಿ ಪ್ರತಿಯೊಬ್ಬರಿಗೆ ನೀಡುವ ಮೂಲಕ ದಂಪತಿಗಳಿಬ್ಬರು ವಂಚನೆ ಮಾಡಿದ್ದಾರೆ. ಈ ಬಗ್ಗೆ ಪಟ್ಟಣದ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಅವರಿಗೆ ನಕಲಿ ಪಿಂಚಣಿ ಆದೇಶ ಪಡೆದಿರುವ ಪ್ರತಿನಿಧಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.ನಕಲಿ ಆದೇಶ ಪ್ರತಿ ಎರಡು ವರ್ಷ ಕಳೆದರೂ ಪಿಂಚಣಿ ಬರದೆ ತೊಳಲಾಡಿದ ಫಲಾನುಭವಿಗಳು ದಂಪತಿ ಈ ಭಾಗದ ನಾಗರಿಕರ ಬಳಿ ಪಿಂಚಣಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ಹಿರಿಯ ನಾಗರಿಕರ ಬಳಿ ಹಣ ಪಡೆದು ನಕಲಿ ದಾಖಲೆ ನೀಡಿ ವಂಚನೆ ಮಾಡಿರುವುದು ಅವರು ನೀಡಿರುವ ನಕಲಿ ಆದೇಶ ಪ್ರತಿ ದಾಖಲೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿ ದೊರೆಯುವ ಸರ್ಕಾರಿ ಸೌಲಭ್ಯವನ್ನು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಸರ್ಕಾರಿ ಕಚೇರಿಗಳಿಗೆ ತೆರಳಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕು. ಇಂತಹ ಮೋಸದ ಪ್ರಕರಣಗಳಿಗೆ ನಿವಾಸಿಗಳು ಹೋಗಬಾರದು. ಇಂತಹ ಪ್ರಕರಣ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ನಕಲಿ ಪಿಂಚಣಿ ಆದೇಶ ಪ್ರತಿ ನೀಡಿ ಕೆಲವರಿಗೆ ವಂಚನೆ ಮಾಡಿರುವ ಬಗ್ಗೆ ರೈತ ಸಂಘಟನೆಯಿಂದ ತಿಳಿದು ಬಂದಿದೆ. ಮುಂದೆ ಇಂತಹ ವಂಚನೆ ಪ್ರಕರಣಗಳಿಗೆ ಸಾರ್ವಜನಿಕರು ಮೊರೆ ಹೋಗದೆ ನೇರವಾಗಿ ಸರ್ಕಾರಿ ಕಚೇರಿಗಳಿಗೆ ತೆರಳಿ ಸೌಲಭ್ಯ ಪಡೆದುಕೊಳ್ಳಬೇಕು ನಾಗರಿಕರು ಇಂತಹ ವ್ಯಕ್ತಿಗಳಿಂದ ಗ್ರಾಮಗಳಲ್ಲಿ ನಿವಾಸಿಗಳಿಗೆ ತಿಳಿ ಹೇಳುವ ಮೂಲಕ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.ಏನು ತಿಳಿಯದ ಮುಗ್ಧ ಜನತೆಗೆ ಇಲ್ಲಿನ ದಂಪತಿ ವಂಚಿಸಿ ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಬೆಂಗಳೂರು ವಿಳಾಸವಿರುವ ನಕಲಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ವಂಚನೆ ಮಾಡಿದ್ದಾರೆ. ಅಂಬಿಕಾಪುರದ ತೋಟದ ಮನೆಯಲ್ಲಿ ಈ ಭಾಗದ ಜನತೆಗೆ ವಂಚನೆ ಮಾಡಿ ನಕಲಿ ದಾಖಲೆ ನೀಡಿ ವಂಚಿಸಿ ಬೆಂಗಳೂರು ಸೇರಿಕೊಂಡಿರುವ ದಂಪತಿ ಮೇಲೆ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು.ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕ