ಕನ್ನಡಪ್ರಭ ವಾರ್ತೆ ಶಿರಹಟ್ಟಿ

ವಿಜಯದಶಮಿ ಕೊನೆ ದಿನವಾದ ಬುಧವಾರ ಮಠದ ಸಂಪ್ರದಾಯಂತೆ ಶ್ರೀ ಜ. ಫಕೀರ ಸಿದ್ದರಾಮ ಸ್ವಾಮಿಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್ ನವಾಜ್ ದರ್ಗಾದ ಸಮೀಪ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಮುಖ ಬೀದಿಗಳಲ್ಲಿ ವಾದ್ಯ ವೃಂದಗಳ ಜತೆಗೆ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಕೂರಿಸಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಶ್ರೀಗಳು ಬನ್ನಿ ವಿನಿಮಯ ಮಾಡಿ ಜನತೆಯನ್ನು ಆಶೀರ್ವದಿಸಿದರು. ಕಳೆದ ೯ ದಿನಗಳಿಂದ ನಡೆದ ನವರಾತ್ರಿ ಆಚರಣೆಯನ್ನು ಕೊನೆಯ ದಿನವಾದ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದಲ್ಲಿ ಬನ್ನಿ ಮುಡಿಯುವ ಆಚರಣೆಗೆ ಸ್ವಾಮಿಗಳೇ ಚಾಲನೆ ನೀಡುತ್ತಾರೆ. ಅನೇಕ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಪರಸ್ಪರ ದ್ವೇಷ ಹಾಗೂ ಭೇದ ಭಾವನೆ ತೊರೆದು ಹಿಂದುಗಳು ಹಾಗೂ ಮುಸ್ಲಿಂಮರು ಬನ್ನಿ ಮುಡಿದು ದ್ವೇಷ ಬಿಡು ಪ್ರೀತಿ ಮಾಡು ಎಂದು ಸಾರುತ್ತಾರೆ. ಹಿರಿಯರು ಹೇಳುವಂತೆ ಈ ಸಂಪ್ರದಾಯಕ್ಕೆ ಅನೇಕ ದಶಕಗಳ ಇತಿಹಾಸವೇ ಇದೆ.

ಒಂದೆಡೆ ಶ್ರೀಗಳು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿ ಜನತೆಯನ್ನು ಆಶೀರ್ವದಿಸುವ ಸಂಭ್ರಮಾಚರಣೆ ನಡೆದರೆ ಮತ್ತೊಂದೆಡೆ ಮರಾಠಾ ಗಲ್ಲಿಯಿಂದ ಭಕ್ತರು ಪಲ್ಲಕ್ಕಿಯಲ್ಲಿ ಅಂಭಾ ಭವಾನಿ ದೇವಿಯ ಭಾವಚಿತ್ರ ಹೊತ್ತು ಮುತ್ತೈದೆಯರು, ಮಹಿಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಬ್ಬದ ಕಳೆ ಹೆಚ್ಚಿಸಿದರು.


ಒಂಬತ್ತು ದಿನ ದೇವಿಯ ಘಟಸ್ಥಾಪನೆ ಮಾಡಿ, ಮಡಿಯಿಂದ ಪೂಜೆ ಸಲ್ಲಿಸಿ ಕೊನೆಯ ದಿನ ಆಯುಧ ಪೂಜೆ ಹಾಗೂ ಮಾರನೆ ದಿನ ವಿಜಯ ದಶಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ರೂಡಿ. ವಿಜಯ ದಶಮಿಯ ಸಡಗರಕ್ಕೆ ನಗರವೆಲ್ಲ ಶೃಂಗಾರಗೊಂಡಿತ್ತು. ದೀಪಾಲಂಕಾರ-ತಳಿರು ತೋರಣಗಳಿಂದ ಬೀದಿಗಳು ಝಗಮಗಿಸುತ್ತಿದ್ದವು.

ಸ್ವಾಮಿಗಳಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಾರಂಭಗೊಂಡ ನಂತರ ಜನತೆ ಬನ್ನಿಕೊಟ್ಟು ಬಂಗಾರದಂತೆ ಬಾಳೋಣ ಎಂದು ಸ್ನೇಹಿತರು, ಬಂಧುಗಳು, ಹಿರಿ-ಕಿರಿಯರು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯ ದಶಮಿ ಸಂಭ್ರಮದಲ್ಲಿ ಮಿಂದೆದ್ದರು. ಪರಸ್ಪರ ಬನ್ನಿ ಕೊಟ್ಟು ನಾವು ನೀವು ಬಂಗಾರದಂಗ್ ಇರೋಣ ಎಂಬ ಶುಭಹಾರೈಕೆಯೊಂದಿಗೆ ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಿದರು.

ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಪೂಜೆ ಸಲ್ಲಿಸಿ ದೇವಿಯನ್ನು ಆರಾಧಿಸಿದರು. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಸುಮಂಗಲೆಯರಿಗೆ ಉಡಿ ತುಂಬಿದರು. ಸಂಜೆ ನೆರೆ ಹೊರೆ ಮನೆಗಳಿಗೆ ತೆರಳಿ ಬನ್ನಿ ವಿನಿಮಯ ಮಾಡಿಕೊಂಡರು.