ಜನರ ಹೃದಯ ಗೆದ್ದ ಫಕ್ಕೀರವ್ವ

| Published : Sep 19 2024, 01:52 AM IST

ಸಾರಾಂಶ

ಫಕ್ಕೀರವ್ವ ಗುಡಿಸಾಗರ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದು, ಬದುಕಿನಲ್ಲಿ ಅನೇಕ ನೋವುಗಳನ್ನು ಉಂಡು, ಗೀಗೀ ಪದಗಳನ್ನು ಹಾಡುತ್ತಾ ತನ್ನ ಹೃದಯದ ಭಾರ ಕಡಿಮೆ ಮಾಡಿಕೊಂಡವಳು.

ಧಾರವಾಡ:

ಕಂಚಿನ ಕಂಠದ ಜಾನಪದ ಹಾಡುಗಾರ್ತಿ ದಿ. ಫಕ್ಕೀರವ್ವ ಗುಡಿಸಾಗರ ತನ್ನ ಸಿರಿಕಂಠದಿಂದ ಸಹಸ್ರಾರು ಜನರ ಹೃದಯ ಗೆದ್ದ ಜಾನಪದ ಕೋಗಿಲೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಫಕ್ಕೀರವ್ವ ಗುಡಿಸಾಗರ ಸಂಸ್ಮರಣೆಯ ದತ್ತಿ ಅಂಗವಾಗಿ ಆಯೋಜಿಸಿದ್ದ ಕಲಾವಿದೆ ಪಾರ್ವತೆವ್ವ ಹೊಂಗಲ ಅವರ ‘ಸಾಂಪ್ರದಾಯಿಕ ಹಾಡುಗಾರಿಕೆ’ಯಲ್ಲಿ ಅವರು ಮಾತನಾಡಿ, ದಿ. ಫಕ್ಕೀರವ್ವ ಗುಡಿಸಾಗರ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದು, ಬದುಕಿನಲ್ಲಿ ಅನೇಕ ನೋವುಗಳನ್ನು ಉಂಡು, ಗೀಗೀ ಪದಗಳನ್ನು ಹಾಡುತ್ತಾ ತನ್ನ ಹೃದಯದ ಭಾರ ಕಡಿಮೆ ಮಾಡಿಕೊಂಡವಳು. ದಿ. ಎಸ್.ಎಂ. ಹೊಳೆಯಣ್ಣವರ ಅವರು ಈ ಜಾನಪದ ಕೋಗಿಲೆಯ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದರು.

ಕಲಾವಿದೆ ಪಾರ್ವತೆವ್ವ ಹೊಂಗಲ ಮಾತನಾಡಿ, ನಾನು ನಿರಕ್ಷರಿ, ನನ್ನ ತಾಯಿ ನೀಡಿದ ಹಾಡುಗಾರಿಕೆಯ ಸಂಸ್ಕಾರದಿಂದ ಇಂದು ಸಹಸ್ರಾರು ಹಾಡುಗಳನ್ನು ಯಾವುದೇ ಸಂಗೀತದ ಪರಿಕರಗಳಿಲ್ಲದೆ ಹಾಡುವುದನ್ನು ರೂಢಿಸಿಕೊಂಡಿದ್ದೇನೆ. ಮೂಲ ಜಾನಪದದ ಶೈಲಿಗೆ ಧಕ್ಕೆಯಾಗದಂತೆ ಜಾನಪದದ ಪಾವಿತ್ರ್ಯತೆ ಕಾಪಾಡಲಾಗಿದೆ. ಈ ಪರಂಪರೆ ಮುಂದಿನ ತಲೆಮಾರಿಗೂ ಮುಂದುವರಿಯಲು ಆಸಕ್ತರನ್ನು ತರಬೇತುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸಂಗೀತಾ ಬೆಂಡಿಗೇರಿ ಹಾಗೂ ಪಾರ್ವತೆವ್ವ ಹೊಂಗಲ ಸಾಂಪ್ರದಾಯಿಕ ಹಾಡುಗಳಾದ ಬೀಸುಕಲ್ಲಿನ ಪದ, ಸೋಬಾನ ಪದ, ಗಣಪತಿ ಹಾಡು, ಲಾಲಿ ಹಾಡು ಸೇರಿದಂತೆ ಜಾನಪದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ದತ್ತಿದಾನಿ ಪರವಾಗಿ ಜಗದೀಶ ಹೊಳೆಯಣ್ಣವರ ಇದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಎಸ್.ಜಿ. ಪಾಟೀಲ, ಶ್ರೀಧರ ಗಸ್ತಿ, ಎಂ.ಬಿ. ಹೆಗ್ಗೇರಿ, ಸಂಗೀತಾ ಬೆಂಡಿಗೇರಿ, ಶ್ರೀಶೈಲ ಕಮತರ, ಜಾಪಣ್ಣವರ ಇದ್ದರು.