ಫಲ್ಗುಣಿ ಯುವಕ ಮಂಡಲ 37ನೇ ವಾರ್ಷಿಕೋತ್ಸವ

| Published : Mar 20 2025, 01:18 AM IST

ಸಾರಾಂಶ

ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಫಲ್ಗುಣಿ ಯುವಕ ಮಂಡಲದ ೩೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಯಾವುದೇ ಸಂಘ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ನಾಯಕತ್ವದ ಜವಾಬ್ದಾರಿ ವಹಿಸಿದವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು. ಹಾಗಾಗಿ ಫಲ್ಗುಣಿ ಯುವಕ ಮಂಡಲ ಇಂದು ಆರಂಭವಾಗಿ ೩೭ ವರ್ಷವಾದರೂ ಹೊಸ ಯುವಪೀಳಿಗೆಗೆ ಮುನ್ನಡೆಸುವ ಅವಕಾಶ ಮಾಡಿಕೊಟ್ಟಿದೆ ಎಂದು ದಿನೇಶ್ ಪೂಜಾರಿ ಕಟ್ಟಣಿಗೆ ಹೇಳಿದ್ದಾರೆ.

ಮಂಗಳವಾರ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಫಲ್ಗುಣಿ ಯುವಕ ಮಂಡಲದ ೩೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇರುವೈಲು ಶಾಲೆಯಿಂದ ವರ್ಗಾವಣೆಗೊಂಡ ದೈಹಿಕ ಶಿಕ್ಷಕ ಪ್ರೇಮಾನಂದ ಹಾಗೂ ಹಿರಿಯ ದೈವ ಪರಿಚಾರಕ, ಯಕ್ಷಗಾನ ಕಲಾವಿದ ಸಂಜೀವ ಭಂಡಾರಿ ಇರುವೈಲು ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದಲ್ಲಿ ಜಂಪ್ ರೋಪ್ ಸ್ಪರ್ಧೆಯಲ್ಲಿ ಆಯ್ಕೆಯಾದ ಪವನ್ ಎಸ್, ಸಾನಿಧ್ಯ, ಸಾನ್ವಿ ಅವರನ್ನು ಗೌರವಿಸಲಾಯಿತು.

ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ಚೇತನಾ ರಾಜೇಂದ್ರ ಹೆಗ್ಡೆ ಪುತ್ತಿಗೆಮನೆ ಧಾರ್ಮಿಕ ಉಪನ್ಯಾಸ ನೀಡಿದರು.

ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಅಧ್ಯಕ್ಷ ಲಕ್ಷ್ಮೀಶ ನಾಯ್ಕ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಧನಂಜಯ್ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಸುವರ್ಣ ವಾರ್ಷಿಕ ವರದಿ ವಾಚಿಸಿದರು. ಪ್ರಸಾದ್‌ ಶೆಟ್ಟಿ ದೊಡ್ಡಗುತ್ತು ಸಾಲ್ಯಾನ್ ವಂದಿಸಿದರು.