ಕಾಳು ಮೆಣಸು ಬೆಲೆ ಇಳಿಕೆ: ಬೆಳೆಗಾರರಿಗೆ ಆತಂಕ

| Published : Feb 20 2024, 01:47 AM IST

ಸಾರಾಂಶ

ಕಪ್ಪು ಬಂಗಾರ ಎಂದೇ ಕರೆಯಲಾಗುವ ಕಾಳು ಮೆಣಸು ಕೊಯ್ಲು ಜಿಲ್ಲೆಯಲ್ಲಿ ಇನ್ನೇನು ಆರಂಭವಾಗುವ ಸಮಯದಲ್ಲೇ ಕಾಳು ಮೆಣಸು ದರ ಇಳಿಮುಖವಾಗುತ್ತಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಕಪ್ಪು ಬಂಗಾರ ಎಂದೇ ಕರೆಯಲಾಗುವ ಕಾಳು ಮೆಣಸು ಕೊಯ್ಲು ಜಿಲ್ಲೆಯಲ್ಲಿ ಇನ್ನೇನು ಆರಂಭವಾಗುವ ಸಮಯದಲ್ಲೇ ಕಾಳು ಮೆಣಸು ದರ ಇಳಿಮುಖವಾಗುತ್ತಿರುವುದು ಜಿಲ್ಲೆಯ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಾಫಿ ವಾಣಿಜ್ಯ ಕೃಷಿಯಾಗಿದ್ದು, ಕಾಳು ಮೆಣಸನ್ನು ಕೂಡ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬೆಳೆಗಾರರು ಕಾರ್ಮಿಕರ ಸಮಸ್ಯೆ, ಅಕಾಲಿಕ ಮಳೆ ಸೇರಿದಂತೆ ವಿವಿಧ ಕಾರಣದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆಗಾರರಿಗೆ ಕಾಳು ಮೆಣಸು ವರದಾನವಾಗಿದ್ದು, ಪ್ರಮುಖ ಆದಾಯವನ್ನು ನೀಡುತ್ತದೆ. ಆದರೆ ಈಗ ಕಾಳು ಮೆಣಸು ಬೆಲೆ ಏರಿಳಿತ ಬೆಳೆಗಾರರನ್ನು ಕಂಗಾಲು ಮಾಡಿದೆ. ಕಳೆದ ತಿಂಗಳು ಪ್ರತಿ ಕ್ವಿಂಟಲ್‍ಗೆ 60 ಸಾವಿರ ಆಸುಪಾಸಿನಲ್ಲಿದ್ದ ಕಾಳು ಮೆಣಸು ದರ ಈಗ 54 ಸಾವಿರಕ್ಕೆ ಇಳಿಕೆಯಾಗಿದೆ. ಎರಡು ವರ್ಷಗಳಿಂದ ಸ್ಥಿರವಾಗಿದ್ದ ದರ ಕೊಯ್ಲಿನ ಆರಂಭದಲ್ಲೇ ಇಳಿಮುಖವಾಗಿದೆ. ಇದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.ವಿಯೆಟ್ನಾಂನಲ್ಲಿ ಕಾಳುಮೆಣಸಿನ ದರ ಪ್ರತಿ ಕ್ವಿಂಟಾಲ್‍ಗೆ 38 ಸಾವಿರ ರು. ದಿಂದ 42 ಸಾವಿರ ರು. ಇದೆ. ಅಲ್ಲಿಂದ ಅಪಾರ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ತಿಂಗಳಿಗೆ ಅಂದಾಜು 400 ಮೆಟ್ರಿಕ್ ಟನ್ ಕಾಳು ಮೆಣಸು ಆಮದಾಗುತ್ತಿದೆ. ಇದರಿಂದ ದೇಶೀಯ ಕಾಳು ಮೆಣಸು ದರ ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಹೆಚ್ಚು ಕಾಳು ಮೆಣಸನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ ವಾರ್ಷಿಕ ಸುಮಾರು 50ರಿಂದ 55 ಸಾವಿರ ಮೆಟ್ರಿಕ್ ಟನ್ ಕಾಳು ಮೆಣಸು ಉತ್ಪಾದನೆ ಮಾಡಲಾಗುತ್ತದೆ. ದೇಶದಲ್ಲಿ 65-70 ಸಾವಿರ ಟನ್ ಬೇಡಿಕೆಯಿದೆ. ಶ್ರೀಲಂಕಾದಿಂದ 10-15 ಸಾವಿರ ಟನ್ ಆಮದಾಗುತ್ತಿದೆ. ಅಲ್ಲದೆ ವಿಯೆಟ್ನಾಂ ನಿಂದ ಕೂಡ ವಾರ್ಷಿಕ 5 ಸಾವಿರ ಟನ್ ಆಮದಾಗುತ್ತಿದೆ.2018ರಲ್ಲಿ 14 ಬೆಳೆಗಾರರ ಸಂಘಟನೆ ಸೇರಿ ಕೇಂದ್ರ ಆರ್ಥಿಕ ಸಚಿವಾಲಯದ ಬಳಿ ತೆರಳಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿದೇಶದಿಂದ ಆಮದಾಗುವ ಕಾಳು ಮೆಣಸು ದರವನ್ನು ಕೆ.ಜಿ.ಗೆ 500 ರು. ನಿಗದಿ ಮಾಡಲಾಗಿದೆ. ಇದರಿಂದ ವಿದೇಶದಿಂದ ಬರುವ ಕಾಳು ಮೆಣಸು ನಿಯಂತ್ರಣ ಆಗುತ್ತಿದೆ. ವಿಯೆಟ್ನಾಂ, ಇಂಡೋನೇಷ್ಯಾ, ಬ್ರೇಜಿಲ್ ಮತ್ತಿತರ ದೇಶಗಳಲ್ಲಿ ಅಲ್ಲಿನ ಕಾಳು ಮೆಣಸು ಬೆಳೆಗಾರರಿಗೆ ಪ್ರತಿ ಕೆ.ಜಿಗೆ 300 ರು. ಬೆಲೆ ದೊರಕುತ್ತಿದೆ. ಆದರೆ ನಮ್ಮ ಭಾರತದ ಬೆಳೆಗಾರರಿಗೆ 500 ರುಪಾಯಿ ಬೆಲೆ ದೊರಕುತ್ತಿದೆ. ಸ್ಥಳೀಯ ಬೆಳೆಗಾರರ ಹಿತದೃಷ್ಟಿಯಿಂದ ಕಾಳುಮೆಣಸಿಗೆ ಸ್ಥಿರ ದರ ಲಭಿಸುವಂತೆ ಸರ್ಕಾರ ಅಗತ್ಯ ಕ್ರಮವಹಿಸಬೇಕು. ಅಕ್ರಮ ಆಮದಿಗೂ ಕಡಿವಾಣ ಹೇರಬೇಕೆಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಕೆ.ಜಿಗೆ 600 ರು. ಬೆಲೆ ಇತ್ತು. ಆದರೆ ಈಗ 540 ಬೆಲೆ ಇದ್ದು, ಕಾಳು ಮೆಣಸು ಬೆಳೆಗಾರರಿಗೆ ಬೆಲೆ ಇಳಿಕೆ ಬರೆ ತಟ್ಟಿದೆ. ಕಾಳು ಮೆಣಸಿಗೆ ಉತ್ತಮ ದರ ದೊರಕುವ ಸಂದರ್ಭದಲ್ಲಿ ಜಿಲ್ಲೆಯ ಹಲವಾರು ಬೆಳೆಗಾರರು ಕಾಳು ಮೆಣಸನ್ನು ದಾಸ್ತಾನು ಇಟ್ಟುಕೊಂಡಿದ್ದಾರೆ. ಆದರೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದವರಿಗೆ ಈಗಿನ ಬೆಲೆ ಇಳಿಕೆಯಿಂದ ಸಂಕಷ್ಟ ಎದುರಾಗಿದ್ದು, ಉತ್ತಮ ಬೆಲೆಗಾಗಿ ಎದುರು ನೋಡುತ್ತಿದ್ದಾರೆ. ಬೆಲೆ ಇನ್ನಷ್ಟು ಕಡಿಮೆಯಾದರೆ ಮತ್ತೆ ತೊಂದರೆಯಾಗಲಿದೆ. ಪ್ರತಿ ತಿಂಗಳ ವರದಿ ಸಲ್ಲಿಕೆ: ಬೆಳೆಗಾರರ ಒಕ್ಕೂಟದಿಂದ ಪ್ರತಿ ತಿಂಗಳು ವಿಯೆಟ್ನಾಂ ನಿಂದ ಆಮದಾಗುತ್ತಿರುವ ಕಾಳು ಮೆಣಸು ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಆಮದುದಾರರ ಹೆಸರು, ವಿಳಾಸ ಮತ್ತು ಇತರ ವಿವರಗಳೊಂದಿಗೆ ಪಿಎಂಒ , ಜಾರಿ ನಿರ್ದೇಶಕರು, ಕಂದಾಯ ಗುಪ್ತಚರ ನಿರ್ದೇಶಕರು ಮತ್ತು ಸಿಬಿಐಗೆ ಮಾಸಿಕ ದೂರನ್ನು ಈ ಸಂಸ್ಥೆಯು ಅಕ್ರಮ ಆಮದುದಾರರ ವಿರುದ್ಧ ಮತ್ತು ಕನಿಷ್ಠ ಅಕ್ರಮ ಆಮದನ್ನು ನಿಯಂತ್ರಿಸುವ ಮೂಲಕ ನೀಡಲಾಗುತ್ತದೆ. ಇದರಿಂದಲೇ ವಿದೇಶಿ ಕಾಳು ಮೆಣಸು ಮೇಲೆ ನಿಯಂತ್ರಣ ಮಾಡಲಾಗುತ್ತಿದೆ ಎಂದು ಕಾಳು ಮೆಣಸು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸದಸ್ಯ ಪ್ರದೀಪ್ ಪೂವಯ್ಯ ಹೇಳುತ್ತಾರೆ. ಈ ಬಾರಿ ಉತ್ಪಾದನೆ ಹೆಚ್ಚಳ ಸಾಧ್ಯತೆ!: ಈ ವರ್ಷ ದೇಶದಲ್ಲಿ ಕಾಳು ಮೆಣಸು ಇಳುವರಿ ಉತ್ತಮವಾಗಿದ್ದು, ಅಪಾರ ಫಸಲು ನಿರೀಕ್ಷಿಸಲಾಗಿದೆ. ಕೇರಳ ರಾಜ್ಯ ಸೇರಿದಂತೆ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನ, ಶಿರಸಿ,ದಕ್ಷಿಣ ಕನ್ನಡದಲ್ಲಿ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ. ಇಂಡಿಯನ್ ಸ್ಪೈಷಸ್ ಬೋರ್ಡ್ ವರದಿ ಮಾಡಿರುವಂತೆ ದೇಶದಲ್ಲಿ ಈ ಬಾರಿ ಸುಮಾರು 65 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಇರಲಿದೆ. ಕ್ಯಾಲಿಕಟ್ ಡೈರೆಕ್ಟರೇಟ್ ಆಫ್ ಅರೆಕಾ ನಟ್ ಅಂಡ್ ಸ್ಪೈಷಸ್ ಡೆವೆಲೆಪ್ಮೆಂಟ್ ಸಂಸ್ಥೆ ಕೂಡ ಈ ಬಾರಿ ಹೆಚ್ಚು ಕಾಳುಮೆಣಸು ದೇಶದಲ್ಲಿ ಉತ್ಪಾದನೆಯಾಗಲಿದೆ ಎಂದು ಹೇಳಿದೆ. ವಿದೇಶಿ ಕಾಳುಮೆಣಸು ಆಮದುದಾರರ ಹೆಸರು, ವಿಳಾಸ ಮತ್ತು ಇತರ ವಿವರಗಳೊಂದಿಗೆ ಪಿಎಂಒ, ಜಾರಿ ನಿರ್ದೇಶಕರು, ಕಂದಾಯ ಗುಪ್ತಚರ ನಿರ್ದೇಶಕರು ಮತ್ತು ಸಿಬಿಐಗೆ ಮಾಸಿಕ ದೂರನ್ನು ಈ ಸಂಸ್ಥೆಯು ಅಕ್ರಮ ಆಮದುದಾರರ ವಿರುದ್ಧ ಮತ್ತು ಕನಿಷ್ಠ ಅಕ್ರಮ ಆಮದನ್ನು ನಿಯಂತ್ರಿಸುವ ಮೂಲಕ ನೀಡಲಾಗುತ್ತದೆ. ಇದರಿಂದ ಇತ್ತೀಚೆಗೆ ಆಮದು ಪ್ರಮಾಣ ನಿಯಂತ್ರಣದಲ್ಲಿದೆ ಎಂದು ಬೆಳೆಗಾರರ ಒಕ್ಕೂಟ ತಾಂತ್ರಿಕ ಸಲಹೆಗಾರ ಪ್ರದೀಪ್ ಪೂವಯ್ಯ ಹೇಳಿದರು.

ಈ ಬಾರಿ ದೇಶೀಯ ಕಾಳು ಮೆಣಸು ಉತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ಇಂಡಿಯನ್ ಸ್ಪೈಷಸ್ ಬೋರ್ಡ್ ಹಾಗೂ ಕ್ಯಾಲಿಕಟ್ ಡೈರೆಕ್ಟರೇಟ್ ಆಫ್ ಅರೆಕಾ ನಟ್ ಅಂಡ್ ಸ್ಪೈಷಸ್ ಡೆವೆಲೆಪ್ಮೆಂಟ್ ಸಂಸ್ಥೆ ಕೂಡ ಮಾಹಿತಿ ನೀಡಿದೆ. ಕಾಫಿಯ ಜೊತೆಗೆ ಕಾಳು ಮೆಣಸು ಬೆಳೆಯುತ್ತಿರುವ ಬೆಳೆಗಾರರಿಗೆ ಈಗ ಕಾಳು ಮೆಣಸು ಉತ್ತಮ ಬೆಲೆ. 600ಕ್ಕೂ ಅಧಿಕ ಬೆಲೆ ಬಂದರೆ ಇನ್ನೂ ಲಾಭ. ಇದರಿಂದ ಬೆಳೆಗಾರರಿಗೆ ಕೃಷಿಯಲ್ಲಿ ಮತ್ತಷ್ಟು ಉತ್ಸಾಹ ಬರುತ್ತದೆ ಎಂದು ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಅಂಕೇಗೌಡ ತಿಳಿಸಿದರು.