ಸರ್ಕಾರ ಪತನ ಬಿಜೆಪಿಗೆ ಹಗಲು ಕನಸು

| Published : May 04 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಲೋಕಸಭಾ ಚುನಾವಣೆಯ ಬಳಿಕ‌ ಸರ್ಕಾರ ಪತನವಾಗುವುದಿಲ್ಲ. ಇದು ಬಿಜೆಪಿಯ ಹಗಲು ಕನಸು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಲೋಕಸಭಾ ಚುನಾವಣೆಯ ಬಳಿಕ‌ ಸರ್ಕಾರ ಪತನವಾಗುವುದಿಲ್ಲ. ಇದು ಬಿಜೆಪಿಯ ಹಗಲು ಕನಸು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಾವು 136 ಶಾಸಕರನ್ನು ಹೊಂದಿ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿದ್ದೇವೆ. ಬಿಜೆಪಿಯವರು ವಿನಾಕಾರಣ ಇಂಥ ಹೇಳಿಕೆಯನ್ನು ನೀಡುತ್ತ ಹೊರಟ್ಟಿದ್ದಾರೆ. ನಾವು ನೀಡಿದ ಗ್ಯಾರಂಟಿ ಯೋಜನೆಯಿಂದ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡು ಡಿ.ಕೆ.ಶಿವಕುಮಾರ ಸಿಎಂ ಆಗುತ್ತಾರೆನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಅಂಥ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯನರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚಿಕ್ಕೋಡಿಯಲ್ಲಿ ದಲಿತ ಸಮುದಾಯದ ಅಭ್ಯರ್ಥಿ ಶಂಬು ಕಲ್ಲೋಳಿಕರ್‌ ಪಕ್ಷೇತರವಾಗಿ ನಿಂತಿರುವ ಕುರಿತು ಈಗ ನನ್ನ ಗಮನಕ್ಕೆ ಬಂದಿದೆ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ ರೈತರು ಕಳುಹಿಸಿದ ಕಬ್ಬಿನಲ್ಲಿ ತೂಕದಲ್ಲಿ ವ್ಯತ್ಯಾಸವಾಗಿ ಅವರಿಗೆ ಅನ್ಯಾಯವಾಗುತ್ತಿದೆ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಸುಮಾರು 78 ಸಕ್ಕರೆ ಕಾರ್ಖಾನೆಗಳು ಇವೆ. ಇದೇ ಸಾರಿ ಮೊದಲ ಬಾರಿಗೆ ಕಬ್ಬಿನ ಕಾರ್ಖಾನೆಗೆ ಹೋಗಿ ಮೌಲ್ಯಮಾಪನ ಸಿಬ್ಬಂದಿ ತೆರಳಿ ತಪಾಸಣೆ ಮಾಡಬೇಕೆಂದು ಸೂಚನೆ ನೀಡಿದೆ. ಒಂದು ಕೆಜಿ ಸಹ ರೈತರಿಗೆ ಮೋಸವಾಗದಂತೆ ಸರ್ಕಾರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ಕೊಡಲಿಲ್ಲ. ಆದರೂ ನಾವು ಜನರಿಗೆ ಹಣ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಹಾಸನದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ್ ವಿಡಿಯೋ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ಹೊಂದಾಣಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಉತ್ತರಿಸಿದ ಅವರು, ಯಾವುದೇ ಹೊಂದಾಣಿಕೆಯಾಗಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿಯಿಂದ ತನಿಖೆ ನಡೆಸುತ್ತಿದೆ. ಸಮಗ್ರ ತನಿಖೆ ನಡೆದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಜು ಧರನಾಯಕ, ಅನಂತ ಬ್ಯಾಕೋಡ, ಮಲ್ಲೇಶ್ ಚೌಗುಲೆ, ಜಯಶ್ರೀ ಮಾಳಗಿ, ಬಿ.ಎನ್.ಚಂದ್ರಪ್ಪ, ಸಿದ್ರಾಯಿ ಮೇತ್ರಿ, ಯಲ್ಲಪ್ಪ ಹುದಲಿ, ಮೋಹನ ಹಿರೇಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.