ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಒಕ್ಕಲಿಗರ ಯುವ ವೇದಿಕೆ ಶಾಂತಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.ಓಟದ ಸ್ಪರ್ಧೆಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಸರಿನಲ್ಲಿ ಬಿದ್ದು, ಎದ್ದು ನಂತರ ಗುರಿಮುಟ್ಟಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಪ್ರಾಥಮಿಕ ಶಾಲೆಯ ಮಕ್ಕಳು ಕೆಸರುಗದ್ದೆಯಲ್ಲಿ ಚಳಿಯನ್ನು ಲೆಕ್ಕಿಸದೆ, ಬಹುಮಾನ ಪಡೆಯುವ ಹುರುಪಿನಲ್ಲಿ ಓಡಿ ಗುರಿ ಮುಟ್ಟಿ ಸಂಭ್ರಮಪಟ್ಟರು.
ಕೆಸರಿನಲ್ಲಿ ಯುವಕರು ಜಿಂಕೆಯಂತೆ ಓಡುವುದನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಹುರಿದುಂಬಿಸಿದರು. ಕೆಸರಿನಲ್ಲಿ ನಡೆದ ಮಹಿಳೆಯರ ಥ್ರೋಬಾಲ್ ಪಂದ್ಯಾಟ ರೋಚಕತೆಯಿಂದ ಕೂಡಿತ್ತು. ಗೆಲುವಿಗಾಗಿ ಶಕ್ತಿಮೀರಿ ಆಟವಾಡುವ ದೃಶ್ಯ ಮನಮೋಹಕವಾಗಿತ್ತು. ಪುರುಷರ ವಾಲಿಬಾಲ್ ಕೂಡ ಗಮನಸೆಳೆಯಿತು.ಕ್ರೀಡಾಕೂಟ ಉದ್ಘಾಟನೆ: ಕ್ರೀಡಾಕೂಟವನ್ನು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಒಕ್ಕಲುತನ ಮೂಲ ಕಸುಬು ಮಾಡಿಕೊಂಡಿರುವ ಒಕ್ಕಲಿಗರಿಗೂ, ಕೆಸರಿಗೂ ಅವಿನಾಭಾವ ಸಂಬಂಧವಿದೆ. ಕೆಸರುಗದ್ದೆ ಕ್ರೀಡಾಕೂಟ ಎಂಬುದು ಜನಾಂಗದ ನಿಜವಾದ ಕ್ರೀಡೆಯಾಗಿದೆ. ಇದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ಯುವ ಜನಾಂಗದ ಕರ್ತವ್ಯವಾಗಿದೆ. ಒಕ್ಕಲಿಗರು ಯಾವತ್ತು ಒಗ್ಗಟ್ಟಾಗಿರಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರವನ್ನು ಕಾಪಾಡಿಕೊಳ್ಳಲು ರಾಜಕೀಯ ರಹಿತವಾಗಿ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘದಿಂದ 9.99 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಒಕ್ಕಲಿಗ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದೆ. ಇದೇ ತಿಂಗಳು ಕಟ್ಟಡದ ಭೂಮಿ ಪೂಜೆ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಬ್ ಜೂನಿಯರ್ ಹಾಕಿ ತಂಡದ ನಾಯಕ ಹೆಗ್ಗುಳ ಗ್ರಾಮದ ಶಶಿತ್‍ಗೌಡ, ಪಿಎಚ್‍ಡಿ ಪದವೀಧರ ಯಡೂರು ಗ್ರಾಮದ ಡಾ. ಸಿ.ಆರ್.ಅಜಿತ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವೇದಿಕೆಯ ಮಾಜಿ ಅಧ್ಯಕ್ಷ ಬಿ.ಜೆ.ದೀಪಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಗೌಡಳ್ಳಿ ಸಹಕಾರ ಸಂಘ ಅಧ್ಯಕ್ಷ ಎಚ್.ಆರ್. ಸುರೇಶ್, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ.ಧನಂಜಯ ಕುಮಾರ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಂ. ಧರ್ಮಪ್ಪ ಇದ್ದರು.