ಅಭಿವೃದ್ಧಿ ಸಹಿಸದೆ ಶಾಸಕ ಕೋನರಡ್ಡಿ ಸುಳ್ಳು ಆರೋಪ

| Published : Oct 09 2024, 01:35 AM IST

ಅಭಿವೃದ್ಧಿ ಸಹಿಸದೆ ಶಾಸಕ ಕೋನರಡ್ಡಿ ಸುಳ್ಳು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರಾಗಿ ಕೇವಲ ಒಂದುವರೆ ವರ್ಷದಲ್ಲಿ ಕ್ಷೇತ್ರದ ರೈತರ ಹಲವಾರು ಸಮಸ್ಯೆ ಪರಿಹರಿಸಿದ್ದಾರೆ. ಜತೆಗೆ ಕ್ಷೇತ್ರಾದ್ಯಂತ ಚಕ್ಕಡಿ ರಸ್ತೆಗಳನ್ನು ಹೆದ್ದಾರಿ ರಸ್ತೆಗಳಂತೆ ಅಭಿವೃದ್ಧಿಪಡಿಸಿದ್ದಾರೆ.

ಹುಬ್ಬಳ್ಳಿ:

ಶಾಸಕ ಎನ್.ಎಚ್. ಕೋನರಡ್ಡಿ ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ, ವಿಪಕ್ಷಗಳ ಹುನ್ನಾರದಿಂದ ಕೆಲವರು ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ ದೂರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿನಿಂದಲೂ ರೈತಪರ ಹೋರಾಟ ಹಾಗೂ ನಿಲುವು ಹೊಂದಿರುವ ಕೋನರಡ್ಡಿ ಅವರು ಶಾಸಕರಾಗಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕರಾಗಿ ಕೇವಲ ಒಂದುವರೆ ವರ್ಷದಲ್ಲಿ ಕ್ಷೇತ್ರದ ರೈತರ ಹಲವಾರು ಸಮಸ್ಯೆ ಪರಿಹರಿಸಿದ್ದಾರೆ. ಜತೆಗೆ ಕ್ಷೇತ್ರಾದ್ಯಂತ ಚಕ್ಕಡಿ ರಸ್ತೆಗಳನ್ನು ಹೆದ್ದಾರಿ ರಸ್ತೆಗಳಂತೆ ಅಭಿವೃದ್ಧಿಪಡಿಸಿದ್ದಾರೆ. ಪ್ರತಿವಾರ ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ತಾಲೂಕಿನಲ್ಲಿ ಜನತಾ ದರ್ಶನ ಮಾಡುವ ಮೂಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾದ ಬೆಣ್ಣಿಹಳ್ಳ ಪ್ರವಾಹ ತಡೆಯಲು ಹಾಗೂ ಹಳ್ಳದ ಮಾರ್ಗವನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೂಲಕ ಸಂಪುಟ ಸಭೆಯಲ್ಲಿ ₹ 200 ಕೋಟಿ ಅನುದಾನಕ್ಕೆ ಒಪ್ಪಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದಲ್ಲಿ ಕೋನರಡ್ಡಿ ಅವರ ಪಾತ್ರವು ಹಿರಿದಾಗಿದೆ ಎಂದರು.

ಈಚೆಗೆ ಅಣ್ಣಿಗೇರಿ ಪಟ್ಟಣದ ಉಗ್ರಾಣದಲ್ಲಿ ರೈತರ ಕಡಲೆ ಹಾಗೂ ಹೆಸರು ಕಾಳುಗಳು ಕಳ್ಳತನವಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ರೈತರ ಎಲ್ಲ ಉತ್ಪನ್ನವನ್ನು ಮರಳಿಕೊಡಿಸುವಲ್ಲಿ ಶ್ರಮಿಸಿದ್ದಾರೆ. ಇಂತಹ ಶಾಸಕರ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದನ್ನು ಕ್ಷೇತ್ರದ ಜನತೆ ಹಾಗೂ ರೈತರು ನಂಬಬಾರದು. ಎಲ್ಲರೂ ಒಟ್ಟಾಗಿ ಅಭಿವೃದ್ಧಿಪರ ಹಾಗೂ ರೈತಪರವಾಗಿರುವ ಶಾಸಕ ಕೋನರಡ್ಡಿ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಿವಾನಂದ ಭೂಮಣ್ಣವರ, ವೀರನಗೌಡ ಮರಿಗೌಡ್ರ, ಬಸವರಾಜ ಬೀರಣ್ಣವರ, ತಾಜುದ್ದೀನ್ ಮುಲ್ಲಾನವರ, ಶಿವರಾಜ ಮಂಟೂರ, ಗುರು ಹಳ್ಳೂರ, ಸೈಯ್ಯದ್‌ ಬಾವಾಖಾನವರ, ಎಂ.ಎಸ್. ರೋಣದ, ರಾಮಪ್ಪ ಗಾಣಿಗೇರಿ ಸೇರಿದಂತೆ ಹಲವರಿದ್ದರು.