ಸಾರಾಂಶ
ಧಾರವಾಡ:
ಸಮೀಪದ ಮುಗದ ಗ್ರಾಮ ಪಂಚಾಯಿತಿಯ 2ನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗದ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷ ಸ್ಥಾನಕ್ಕೇರಿದ್ದ ಅಧ್ಯಕ್ಷರ ಜಾತಿ ಪ್ರಮಾಣಪತ್ರವೇ ಇದೀಗ ರದ್ದಾಗುವ ಮೂಲಕ ಅಧ್ಯಕ್ಷಗಿರಿಗೆ ಕುತ್ತು ಬಂದಿದೆ.ಅಧ್ಯಕ್ಷ ರವಿ ಕಸಮಳಗಿ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಿದ್ದಲ್ಲದೇ ಈ ಜಾತಿ ಪ್ರಮಾಣಪತ್ರ ನೀಡಿದ ಧಾರವಾಡ ತಹಸೀಲ್ದಾರ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಹನುಮಂತ ಕೊಚ್ಚರಗಿ ಸೇರಿದಂತೆ ಅಧಿಕಾರಿ ವರ್ಗದವರಿಗೂ ಕಸಿವಿಸಿ ಶುರುವಾಗಿದೆ. ಈ ಮಧ್ಯೆ ಜಾತಿ ಪ್ರಮಾಣಪತ್ರದ ವಿರುದ್ಧ ಗ್ರಾಪಂ ಸದಸ್ಯರಾದ ಮಂಜುನಾಥ ಶೆರೆವಾಡ, ರವೀಂದ್ರ ಕೆಂಗಾನೂರ, ರಮೇಶ ಹಣಮುರ ಅವರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಪ್ರಕರಣದ ವಿವರ:ಗ್ರಾಪಂ 2ನೇ ಅವಧಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿತ್ತು. ಆದರೆ, 2019ನೇ ಸಾಲಿನಲ್ಲಿ ಧಾರವಾಡ ತಹಸೀಲ್ದಾರ ಕಚೇರಿಯ ಗ್ರೇಡ್-2 ತಹಸೀಲ್ದಾರ ಅವರಿಂದ ಪ್ರವರ್ಗ 3ಬಿ ಜೈನರು (ದಿಗಂಬರರು) ಎಂಬ ಜಾತಿ ಪ್ರಮಾಣ ಪಡೆದಿದ್ದ ರವಿ ಮತ್ತೆ 2023ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದೂ ಬೋಗಾರ ಪ್ರವರ್ಗ ಅ ವರ್ಗದ ಜಾತಿ ಪ್ರಮಾಣವನ್ನು ಅದೇ ಧಾರವಾಡ ತಹಸೀಲ್ದಾರ ಕಚೇರಿಯ ಗ್ರೇಡ್-2 ತಹಸೀಲ್ದಾರ ಅವರಿಂದ ಪಡೆದಿದ್ದಾರೆ. ಈ ರೀತಿ ಜಾತಿ ಪ್ರಮಾಣಪತ್ರದ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನಿಂತು ಗೆದ್ದಿದ್ದು, ಇದೀಗ ಒಂದೂವರೆ ವರ್ಷದ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನೂ ಒಂದು ವರ್ಷ ಅಧಿಕಾರವಿದೆ.
ಈ ಜಾತಿ ಪ್ರಮಾಣಪತ್ರದ ವಿರುದ್ಧ ವರ್ಷದ ಹಿಂದೆಯೇ ಧಾರವಾಡ ಉಪವಿಭಾಗಾಧಿಕಾರಿಗಳಿಗೆ ದೂರು ಕೊಡಲಾಗಿತ್ತು. ಎಸಿ ಸೂಚನೆಯಂತೆ ತಹಸೀಲ್ದಾರ ಗ್ರೇಡ್-೨ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಇಲ್ಲಿ ಗ್ರಾಪಂ ಸದಸ್ಯರು ಹಿನ್ನಡೆ ಅನುಭವಿಸಿದ್ದಲ್ಲದೇ ಅಧ್ಯಕ್ಷರ ಪರವಾಗಿಯೇ ಆದೇಶ ಹೊರ ಬಿದ್ದಿತ್ತು. ಆದರೆ, ಈ ಆದೇಶ ಪ್ರಶ್ನಿಸಿ ಧಾರವಾಡ ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಈ ಬಗ್ಗೆ ಸಮಗ್ರವಾಗಿ ದಾಖಲೆ ಪರಿಶೀಲಿಸಿದಾಗ ಜಾತಿ ಪ್ರಮಾಣ ನೀಡುವಲ್ಲಿ ಆಗಿರುವ ತಪ್ಪು ಬೆಳಕಿಗೆ ಬಂದಿದೆ. ಈ ವೇಳೆ ಗ್ರಾಪಂ ಅಧ್ಯಕ್ಷರಷ್ಟೇ ಅಲ್ಲದೇ ಗ್ರೇಡ್-2 ತಹಸೀಲ್ದಾರ, ಕಂದಾಯ ನಿರೀಕ್ಷಕರು ಹಾಗೂ ಮುಗದ ಗ್ರಾಮ ಲೆಕ್ಕಾಧಿಕಾರಿ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಈ ಪ್ರಕರಣದ ವಾದ ಮತ್ತು ಪ್ರತಿವಾದ ಆಲಿಸಿದ್ದಲ್ಲದೇ ದಾಖಲೆ ಪರಿಶೀಲಿಸಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು, ಧಾರವಾಡ ತಹಸೀಲ್ದಾರ ಕಚೇರಿಯ ಗ್ರೇಡ್-2 ತಹಸೀಲ್ದಾರರಾದ ಹನುಮಂತ ಕೊಚ್ಚರಗಿ ನೀಡಿದ್ದ ಹಿಂದೂ ಬೋಗಾರ ‘ಅ’ ರ್ವದ ಜಾತಿ ಪ್ರಮಾಣಪತ್ರವನ್ನೇ ರದ್ದುಗೊಳಿಸಿ, ಆದೇಶಿಸಿದೆ.ಅನರ್ಹಕ್ಕೆ ಆಗ್ರಹ:
2024 ನ. 19ರಂದು ಆದೇಶ ಹೊರಡಿಸಿರುವ ಧಾರವಾಡ ಉಪವಿಭಾಗಾಧಿಕಾರಿಗಳು, ಮುಗದ ಗ್ರಾಪಂ ಅಧ್ಯಕ್ಷ ರವಿ ಚಂದ್ರಪ್ಪ ಕಸಮಳಗಿ ಅವರಿಗೆ ಚುನಾವಣೆ ಉದ್ದೇಶಕ್ಕಾಗಿ ಧಾರವಾಡ ಗ್ರೇಡ್-2 ತಹಸೀಲ್ದಾರರು 2023ರಲ್ಲಿ ನೀಡಿದ್ದ ಅ ವರ್ಗದ ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದಾರೆ. ಈ ಪ್ರಮಾಣಪತ್ರದ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿರುವ ರವಿ ಕಸಮಳಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ, ಹೊಸ ಅಧ್ಯಕ್ಷರ ಆಯ್ಕೆ ಮಾಡುವಂತೆ ಧಾರವಾಡ ಉಪವಿಭಾಗಾಧಿಕಾರಿ ಅವರಿಗೆ ಗ್ರಾಪಂ ಸದಸ್ಯರಾದ ಮಂಜುನಾಥ ಶೆರೆವಾಡ, ರವೀಂದ್ರ ಕೆಂಗಾನೂರ, ರಮೇಶ ಹಣಮುರ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗೂ ದೂರು ಕೊಟ್ಟಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.31ಡಿಡಬ್ಲೂಡಿ12ಉಪವಿಭಾಗಾಧಿಕಾರಿಗಳು ಮಾಡಿರುವ ಆದೇಶ