ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ವಿರುದ್ಧ ಷಡ್ಯಂತ್ರ್ಯ ಹಾಗೂ ಅಪಪ್ರಚಾರ ನಡೆಸುತ್ತಿರುವವರನ್ನು ಕೂಡಲೇ ಬಂಧಿಸುವಂತೆ ಹೋಬಳಿ ಕೇಂದ್ರದ ಶ್ರೀ ಪಂಚಲಿಂಗೇಶ್ವರ ಪಾದಯಾತ್ರೆಗಳ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಮತ್ತು ಭಕ್ತರು ಹೋಬಳಿ ಕೇಂದ್ರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಸೋಮವಾರ ಬೆಳಗ್ಗೆ ಗ್ರಾಮದ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಿರಂತರ ಷಡ್ಯಂತ್ರ್ಯ ಹಾಗೂ ಅಪಪ್ರಚಾರ ನಡಸುತ್ತಿರುವವರ ವಿರುದ್ಧ ಘೋಷಣೆ ಕೂಗುತ್ತಾ ಶ್ರೀ ಮಂಜುನಾಥ ಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆಯವರ ಭಾವಚಿತ್ರವನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಪುರವರ್ಗ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇತ್ತೀಚಿನ ಕಳೆದ 2 ವರ್ಷಗಳಿಂದ ನಿರಂತರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಕುಟುಂಬದ ವಿರುದ್ಧ ಅಪಪ್ರಚಾರ ಹಾಗೂ ಷಡ್ಯಂತ್ರ್ಯ ಮಾಡಲಾಗುತ್ತಿದೆ. ಈ ಎಲ್ಲಾ ಘಟನೆಗಳಿಂದ ಭಕ್ತರು ಅಸಮಾಧಾನಗೊಂಡಿದ್ದಾರೆ. ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೆ ಕೇವಲ ಕರ್ನಾಟಕವಲ್ಲದೆ ದೇಶದ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಧರ್ಮಸ್ಥಳವನ್ನು ಅಪವಿತ್ರ ಮಾಡಲು ಹೊರಟಿರುವ ದುಷ್ಟರನ್ನು ಶೀಘ್ರ ಬಂಧಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿ, ಮುಂಬರುವ ದಿನಗಳಲ್ಲೂ ಹೀಗೆ ಮುಂದುವರೆದರೆ ಷಡ್ಯಂತ್ರ್ಯ ನಡೆಸುತ್ತಿರುವ ವಿರುದ್ಧ ಮತ್ತು ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಬೀದಗಿಳಿದು ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಎನ್ಎಸ್ ಗಿರೀಶ್ ಪಂಚಲಿಂಗೇಶ್ವರ ಪಾದಯಾತ್ರೆ ಸಮಿತಿ ಅಧ್ಯಕ್ಷ ಹೋಟೆಲ್ ರಾಜಣ್ಣ ಮಾತನಾಡಿದರು. ವಿವಿಧ ಸಂಘ ಸಂಘಟನೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ನಂತರ ನಾಡಕಚೇರಿಗೆ ಆಗಮಿಸಿ ಹೋಬಳಿ ಉಪತಹಸೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಎನ್.ಆರ್. ಶಿವಕುಮಾರ್, ಗ್ರಾಪಂ ಸದಸ್ಯರಾದ ಹೊನ್ನೇಗೌಡ, ಎನ್.ಎಸ್. ಮಂಜುನಾಥ್, ನಟರಾಜ್ ಯಾದವ್, ಪ್ರಮುಖರಾದ ಎನ್.ಜೆ. ಸೋಮನಾಥ್, ಕಾಂಗ್ರೆಸ್ ಮುಖಂಡರಾದ ಫೈನಾನ್ಸ್ ಪ್ರಕಾಶ್, ಬಾಣನಕೆರೆ ಅಶೋಕ್, ಎಚ್.ಜೆ. ಕಿರಣ್, ಎನ್‌ಸಿ ನಟೇಶ್, ಮುಖಂಡರಾದ ಮಹಮ್ಮದ್ ಜಾವಿದ್, ಕೃಪಾ ಶಂಕರ್, ಎನ್ ಸಿ ಕುಮಾರಸ್ವಾಮಿ, ಎಂ ಎಸ್ ಸುರೇಶ್, ಚಿರಂಜೀವಿ, ಪಂಚಲಿಂಗೇಶ್ವರ ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ದೊಡ್ಡೇಗೌಡ, ಉಪಾಧ್ಯಕ್ಷ ಮುದ್ದನಹಳ್ಳಿ ರಾಜಣ್ಣ, ಖಜಾಂಚಿ ವಿಮಲ್ ಸೇಟ್, ಸದಸ್ಯರಾದ ರವಿಶಾಚಾರ್, ಲೋಕೇಶ್, ಕೆಎಸ್‌ಆರ್‌ಟಿಸಿ ಗಣೇಶ್, ಪುರಿ ಗುಂಡ, ಡೈರಿ ಗೋಪಿ, ಉಮೇಶ್, ಎನ್. ಪಿ ಪ್ರದೀಪ್, ಎನ್ ಆರ್ ಪ್ರದೀಪ್, ವಿರುಪಾಕ್ಷ, ಮರಿ ಶೆಟ್ಟಿಹಳ್ಳಿ ಸತೀಶ್, ಬಂಡೆಕೇರಿ ಆನಂದ್, ರವಿ ಆರ್ಟ್ಸ್, ಬಾಬು, ಪೈಂಟ್ರು ದೀಪಕ್ ಪಾಲ್ಗೊಂಡಿದ್ದರು.