ಸಾರಾಂಶ
ಧಾರವಾಡ: ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಗೀತಗಾರರು ಧಾರವಾಡದ ಸಂಗೀತ ಕಲಾ ಶ್ರೀಮಂತಿಕೆ ಹೆಚ್ಚಿಸಿದ್ದಾರೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಕಲ್ಲಯ್ಯ ಅಜ್ಜನವರು ಹೇಳಿದರು.
ಇಲ್ಲಿಯ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಜಂಟಿಯಾಗಿ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ 133ನೇ ಜಯಂತಿ ಹಾಗೂ ಸಂಗೀತೋತ್ಸವ, ಸನ್ಮಾನದಲ್ಲಿ ಸಾನ್ನಿಧ್ಯ ವಹಿಸಿದ ಅವರು, ನಾಡಿನಾದ್ಯಂತ ಸಂಚರಿಸಿ, ಕಷ್ಟದ ದಿನಗಳಲ್ಲಿ ಜೋಳಿಗೆ ಕಟ್ಟಿ ನಾಡಿನ ಸಾವಿರಾರು ಅಂಧ ಅನಾಥರಿಗೆ ಅನ್ನ, ಆಶ್ರಯ ನೀಡುವುದರ ಜತೆಗೆ ಅವರಿಗೆ ಸಂಗೀತ ಶಿಕ್ಷಣದ ಮೂಲಕ ಅನೇಕ ಸಂಗೀತ ದಿಗ್ಗಜರು ಬೆಳೆಯಲು ಕಾರಣ ಕೀರ್ತರಾದವರು ಪಂ.ಡಾ. ಪುಟ್ಟರಾಜ ಗವಾಯಿಗಳು. ರಾಜ್ಯ ಸರ್ಕಾರ ಕಳೆದ ಸಾಲಿನಿಂದ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದ್ದು ಸಂತಸ ತಂದಿದೆ ಎಂದ ಅವರು, ಸಂಗೀತ ಕಾರ್ಯಕ್ರಮಗಳಿಗಾಗಿಯೇ ಧಾರವಾಡದಲ್ಲಿ ಒಂದು ಸಭಾಭವನ ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿದ್ದ ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ, ವೈಜ್ಞಾನಿಕ ಯುಗದಲ್ಲಿ ಸಂಗೀತಕ್ಕೆ ಮನಸನ್ನು ಆಹ್ಲಾದಿಸುವ ಶಕ್ತಿಯಿದೆ. ಪ್ರಸ್ತುತ ಮನೋವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಂಗೀತ ಕಾರ್ಯಕ್ರಮಗಳು ಸಾತ್ವಿಕ ಮತ್ತು ಭಾವನಾತ್ಮಕ ಬಾಂಧವ್ಯ ಬೆಸೆಯುತ್ತದೆ ಎಂದರು.
ಗಾನಯೋಗಿ ಪಂಚಾಕ್ಷರಿ ಗವಾಯಿ ಪ್ರಶಸ್ತಿ ಪುರಸ್ಕೃತ ಪಂ.ಸೋಮನಾಥ ಮರಡೂರ, ನಿಜಗುಣ ಪುರಂದರ ಪ್ರಶಸ್ತಿ ಪುರಸ್ಕೃತ ಪಂ.ಎಂ.ವೆಂಕಟೇಶಕುಮಾರ, ಅಕ್ಕಮಹಾದೇವಿ ಮಠ, ಬಸವ ರಾಷ್ಟ್ರೀಯ ಪುರಸ್ಕೃತ ಡಾ.ವೀರಣ್ಣ ರಾಜೂರ, ಡಾ. ಎನ್.ಜಿ. ಮಹದೇವಪ್ಪ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಮಾಲತಿ ಪಟ್ಟಣಶೆಟ್ಟಿ ಮತ್ತು ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಗಾಯತ್ರಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಿತರ ಪರವಾಗಿ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಮಾತನಾಡಿ, ವಚನ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸಿದ ಕೀರ್ತಿ ಪಂ.ಪಂಚಾಕ್ಷರಿ ಗವಾಯಿಗಳಿಗೆ ಸಲ್ಲುತ್ತದೆ. ಪ್ರತಿಷ್ಠಾನವು ಸಂಗೀತ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.ಇದು ಸಂಗೀತ ಸಾಧಕರೇ ಕಟ್ಟಿದ ಪ್ರತಿಷ್ಠಾನವಾಗಿದೆ ಎಂದರು.
ಡಾ. ಉದಯಕುಮಾರ ದೇಸಾಯಿ, ಉಸ್ತಾದ ಶಫೀಕಖಾನ್, ಪಿ.ಸಿ. ಹಿರೇಮಠ ಇ್ದದರು. ಐಶ್ವರ್ಯ ದೇಸಾಯಿ ಸ್ವಾಗತಿಸಿದರು. ಮಹಾಬಲೇಶ್ವರ ಹಾಸಿನಾಳ ಸ್ವಾಗತಿಸಿದರು, ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಮೇಘಾ ಪಾಟೀಲ ನಿರೂಪಿಸಿದರು. ಡಾ. ಅರ್ಜುನ ವಠಾರ ವಂದಿಸಿದರು.ನಂತರ ನಡೆದ ಸಂಗೀತ ಕಚೇರಿಯಲ್ಲಿ ಶಂಕರ ಕಬಾಡಿ ವಯೊಲಿನ್‌ಗೆ ತಬಲಾ ಡಾ. ರವಿ ಕಿರಣ ನಾಕೋಡ ನೀಡಿದರು. ಡಾ. ವಿಶ್ವನಾಥ ಹಿರೇಮಠ ಗಾಯನಕ್ಕೆ ಶ್ರೀಧರ ಮಾಂಡ್ರೆ ತಬಲಾ, ಸತೀಶ ಭಟ್ ಹಾರ್ಮೋನಿಯಂ ಸಾಥ್ ನೀಡಿದರು.