2009ರಲ್ಲಿ ಎಂಪಿಲ್ ಪದವಿ ಪಡೆದವರಿಗೂ ಅವಕಾಶ ನೀಡಬೇಕು. ಸರ್ಕಾರ ಅತಿಥಿ ಉಪನ್ಯಾಸಕರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ.
ಗದಗ: ಹಲವು ವರ್ಷಗಳಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಾ ಬಂದಿರುವ 6 ಸಾವಿರ ಅತಿಥಿ ಉಪನ್ಯಾಸಕರ ಕುಟುಂಬ ಬೀದಿಗೆ ಬೀಳುವಂತಾಗಿದೆ ಸರ್ಕಾರ ಸೇವೆಯಿಂದ ಮುಂದುವರಿಸಬೇಕು ಮತ್ತು ಸೇವೆ ಸಲ್ಲಿಸಿ ಹೊರಗುಳಿದವರಿಗೂ ಅವಕಾಶ ನೀಡಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ ಆಗ್ರಹಿಸಿದರು.ಸೇವೆಯಲ್ಲಿ ಇರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
2009ರಲ್ಲಿ ಎಂಪಿಲ್ ಪದವಿ ಪಡೆದವರಿಗೂ ಅವಕಾಶ ನೀಡಬೇಕು. ಸರ್ಕಾರ ಅತಿಥಿ ಉಪನ್ಯಾಸಕರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ. ಇದನ್ನೆಲ್ಲ ನೋಡುತ್ತಿರುವ ಬುದ್ಧಿಜೀವಿಗಳು, ಇವರಿಂದ ಜ್ಞಾನ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇತ್ತ ಗಮನವಿಟ್ಟು ನೋಡುತ್ತಿದ್ದಾರೆ. ಇದರ ಪರಿಣಾಮ ನಿಮ್ಮ ಮೇಲೆ ಬೀಳಲಿದೆ. ಶೀಘ್ರದಲ್ಲಿ ನ್ಯಾಯ ನೀಡದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಅತಿಥಿ ಉಪನ್ಯಾಸಕಿ ಗೀತಾ ಎಂ.ಕೆ. ಮಾತನಾಡಿ, 11 ದಿನಗಳ ಕಾಲ ಹೋರಾಟದಲ್ಲಿ ನಿರತರಾಗಿರುವ ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ಕಾಳಜಿ ತೋರಿಸದಿರುವುದು ಶೋಚನೀಯ ಸಂಗತಿ. 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಅತಿಥಿ ಉಪನ್ಯಾಸಕ ಶರಣಪ್ಪ ಮಡಿವಾಳರ ಮಾತನಾಡಿ, ಮಾನವೀಯತೆಯಡಿ ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ಬಿಎ, ಬಿಕಾಂ, ಬಿಎಸ್‌ಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಕಟ್ಟಿದ ನಮಗೆ ಇವತ್ತು ನಾನ್ ಯುಜಿಸಿ ಎಂದು ಹೇಳಿ ದಿಢೀರನೆ 6 ಸಾವಿರ ಕುಟುಂಬಗಳನ್ನು ಬೀದಿಗೆ ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಎಂ.ವಿ. ದೇಸಾಯಿಗೌಡರ, ಶರಣು ಮರಗುದ್ದಿ, ಭಗತ್ ಸಿಂಗ್ ನವಲೂರಕರ, ಎಸ್.ಎ. ಸಂಗನಾಳ, ಶಾಂತನಗೌಡ ಹುಲ್ಲೂರ, ಶ್ರೀದೇವಿ, ರೇಖಾ, ಗೀತಾ ಮೇಟಿ ಸೇರಿದಂತೆ ಹೊಸಪೇಟಿ, ದಾಂಡೇಲಿ, ಹೊನ್ನಾವರ, ಕಿತ್ತೂರು, ಕಾರವಾರ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅತಿಥಿ ಉಪನ್ಯಾಸಕರು ಇದ್ದರು.