ಸಾರಾಂಶ
ಸೋಮವಾರ ಪುತ್ತೂರು ತಾಲೂಕು ಪಂಚಾಯಿತಿ ಕಿರು ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಗ್ರಾಮ ಜಾಗೃತಿ ವೇದಿಕೆ, ಜನ ಶಿಕ್ಷಣ ಟ್ರಸ್ಟ್ ಮತ್ತು ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಆಯೋಜನೆಯಲ್ಲಿ ನಡೆದ ‘ಸಮುದಾಯದತ್ತ ಸಾಂತ್ವನ’ ಕಾರ್ಯಕ್ರಮ ಉದ್ಘಾಟಿಸಿ, ಔಷಧೀಯ ಸಸ್ಯ ವಿತರಣೆ ಮಾಡಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಮಹಿಳೆಯರು ಇಂದಿಗೂ ಕುಟುಂಬಗಳಲ್ಲಿ ಕಿರುಕುಳ ಅನುಭವಿಸುತ್ತಲೇ ಇದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಕುಟುಂಬಗಳನ್ನು ಜೋಡಿಸುವ ಕಾರ್ಯವನ್ನು ಸಾಂತ್ವನ ಕೇಂದ್ರ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯಪಟ್ಟಿದ್ದಾರೆ.ಸೋಮವಾರ ಪುತ್ತೂರು ತಾಲೂಕು ಪಂಚಾಯಿತಿ ಕಿರು ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಗ್ರಾಮ ಜಾಗೃತಿ ವೇದಿಕೆ, ಜನ ಶಿಕ್ಷಣ ಟ್ರಸ್ಟ್ ಮತ್ತು ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಆಯೋಜನೆಯಲ್ಲಿ ನಡೆದ ‘ಸಮುದಾಯದತ್ತ ಸಾಂತ್ವನ’ ಕಾರ್ಯಕ್ರಮ ಉದ್ಘಾಟಿಸಿ, ಔಷಧೀಯ ಸಸ್ಯ ವಿತರಣೆ ಮಾಡಿ ಅವರು ಮಾತನಾಡಿದರು.
ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಸಂಸಾರದಲ್ಲಿ ಸಮಸ್ಯೆಗಳು ಉಂಟಾಗುವುದು ಸಹಜ. ಆದರೆ ಅದನ್ನು ಬೆಳೆಯಲು ಬಿಡದೆ ಇತ್ಯರ್ಥ ಪಡಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ. ಅಂತಹ ಕೆಲಸವನ್ನು ಮಹಿಳಾ ಸಾಂತ್ವನ ಕೇಂದ್ರವು ಮಾಡುತ್ತಿದೆ. ಹಿಂದೆಲ್ಲಾ ಮಹಿಳೆಯರಿಗೆ ಆರ್ಥಿಕ ಶಕ್ತಿಯ ಕೊರತೆ ಕಾಡುತ್ತಿದೆ. ಆದರೆ ಈಗ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಆರ್ಥಿಕ ಶಕ್ತಿ ಉತ್ತಮವಾಗಿದೆ ಎಂದರು.ದ.ಕ. ಜಿಲ್ಲೆಯ ಸ್ವಚ್ಛತೆಯ ಜಿಲ್ಲಾ ರಾಯಭಾರಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಮಾತನಾಡಿ, ಸಾಂತ್ವನ ಕೇಂದ್ರವು ಮಹಿಳೆಯರ ಸಬಲೀಕರಣ ಕೇಂದ್ರವಾಗುವ ಜೊತೆಗೆ ಇದೊಂದು ಜನರ ಕೇಂದ್ರವಾಗಿ ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದತ್ತ ಸಾಂತ್ವನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಅವರು, ಹಿಂಸೆ ಮುಕ್ತ ಸಮಾಜ ನಮ್ಮೆಲ್ಲರ ಗುರಿಯಾಗಬೇಕು. ಕೇವಲ ದೈಹಿಕ ದೌರ್ಜನ್ಯ ಮಾತ್ರವಲ್ಲದೆ ಮಾನಸಿಕ ಹಿಂಸೆಯಿಂದ ಮಹಿಳೆಯರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಇದಕ್ಕೆ ನಮ್ಮ ಮನೋಭಾವನೆ ಬದಲಾವಣೆಯೊಂದೇ ಪರಿಹಾರವಾಗಿದೆ ಎಂದರು.ಬಳಿಕ ಮಹಿಳಾ ದೌರ್ಜನ್ಯ ತಡೆ ಅಭಿಯಾನದ ಕುರಿತು ಸಮಾಲೋಚನೆ, ಸಂವಾದ ಮತ್ತು ಸಂಕಲ್ಪ ನಡೆಯಿತು. ಸುಗ್ರಾಮ ಜಾಗೃತಿ ವೇದಿಕೆ ಅಧ್ಯಕ್ಷೆ ಮಾಲತಿ, ಅಂಗನವಾಡಿ ಮೇಲ್ವಿಚಾರಕಿ ವನಿತಾ ಮತ್ತಿತರರು ಇದ್ದರು.
ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ಸ್ವಾಗತಿಸಿದರು. ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತರಾದ ರೇಖಾ, ಅಶ್ವಿನಿ, ಬಿಂದು ಕುಮಾರಿ, ನಿತಿನ್‌ಕುಮಾರ್ ಕೆ. ನಿರೂಪಿಸಿದರು.