ಸಂಘಟನೆಗಳ ಬೆಳವಣಿಗೆಗೆ ಕೌಟುಂಬಿಕ ಸಹಕಾರ ಅಗತ್ಯ: ಸೂಫಿ ಹಾಜಿ

| Published : May 30 2025, 12:44 AM IST

ಸಂಘಟನೆಗಳ ಬೆಳವಣಿಗೆಗೆ ಕೌಟುಂಬಿಕ ಸಹಕಾರ ಅಗತ್ಯ: ಸೂಫಿ ಹಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಸಮುದಾಯಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯಾವುದೇ ಸಮುದಾಯಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು. ಈ ಸಂಘಟನೆಗಳು ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನಡೆಯಬೇಕಾದರೆ ಅದರ ಪದಾಧಿಕಾರಿಗಳ ಮತ್ತು ಸದಸ್ಯರ ಕೌಟುಂಬಿಕ ಸಹಕಾರ ಅತಿ ಮುಖ್ಯವಾಗುತ್ತದೆ. ಇದರಿಂದ ಸಂಘಟನೆಗಳು ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟರು.ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ.ಎ.) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳಿಗಾಗಿ ಮತ್ತು ಅವರ ಕುಟುಂಬದವರಿಗಾಗಿ ವಿರಾಜಪೇಟೆ ಸಮೀಪದ ಕದನೂರಿನ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದ್ದ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ-2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಸಮಾಜದ ಶಕ್ತಿಯಾಗಿ ರೂಪುಗೊಳ್ಳಲು ಆಡಳಿತ ಮಂಡಳಿ ಪದಾಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಘಟನೆಗಳಲ್ಲಿ ಪದಾಧಿಕಾರಿಗಳು ಅವರನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದರೆ ಅವರ ಕುಟುಂಬ ಸದಸ್ಯರ ಸಹಕಾರವೂ ಅತಿ ಮುಖ್ಯ ಎಂದು ಒತ್ತಿ ಹೇಳಿದರು.

ಆಡಳಿತ ಮಂಡಳಿ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇದ್ದಲ್ಲಿ ಸಂಘಟನೆಗಳ ಅಭಿವೃದ್ಧಿ ಸಾಧ್ಯ. ಅನೇಕ ಏಳು ಬೀಳುಗಳೊಂದಿಗೆ ಮತ್ತು ಅನೇಕ ಮಹನೀಯರ ಶ್ರಮದಿಂದ ಇಂದು ಹೆಮ್ಮರವಾಗಿ ಬೆಳೆದಿರುವ ಕೆಎಂಎ, ತನ್ನ ಸಮುದಾಯ ಸೇವೆಯನ್ನು ಮುಂದುವರಿಸಲು ಪ್ರತಿ ಪದಾಧಿಕಾರಿಗಳ ಬದ್ಧತೆ ಅತ್ಯಗತ್ಯ. ಇದರಿಂದ ಸಂಸ್ಥೆಯ ಸಾಂಖಿಕ ಬೆಳವಣಿಗೆಯೂ ಸಾಧ್ಯ ಎಂದು ಸೂಫಿ ಹಾಜಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಸಮುದಾಯ ಸಂಘಟನೆಗಳು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಲು ದೂರದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರೂ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಸೇವಾಮನೋಭಾವನೆ ರೂಢಿಸಿಕೊಂಡಾಗ ಮಾತ್ರ ಸಾಮಾಜಿಕ ಜೀವನದಲ್ಲಿ ಪ್ರಗತಿಯೆಡೆಗೆ ಸಾಗಲು ಸಾಧ್ಯ. ಕೌಟುಂಬಿಕ ಸಂತೋಷಕೂಟ ಆಯೋಜಿಸುವುದರಿಂದ ಸದಸ್ಯರ ಕುಟುಂಬ ವರ್ಗದವರ ಮಧ್ಯೆ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇದು ಸಂಘಟನೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಮಾತನಾಡಿ, ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ ಏರ್ಪಡಿಸುವುದರಿಂದ ಇಡೀ ಆಡಳಿತ ಮಂಡಳಿ ಸದಸ್ಯರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಮೂಡುತ್ತದೆ. ಇದರಿಂದ ಪರಸ್ಪರ ಕೌಟುಂಬಿಕ ಪ್ರೀತಿ ಭಾವನೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವು ಸಾಂಪ್ರದಾಯಿಕ ''''''''ಅಬ್ಲ್ ಕೊಯೆ'''''''' (ಅವಲಕ್ಕಿಯಿಂದ ಮಾಡಲಾಗುವ ವಿಶೇಷ ಖಾದ್ಯ) ತಯಾರಿಕೆಗೆ ಚಾಲನೆ ನೀಡುವ ಮೂಲಕ ಆರಂಭಗೊಂಡಿತು. ಕಳೆದ ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ವಿಶೇಷ ಅತಿಥಿಯಾಗಿ ಆಯ್ಕೆಗೊಂಡಿದ್ದ ಕೆ.ಎಂ.ಎ. ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾಗಿ ಸರಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರಾದ ಕೋಳುಮಂಡ ರಫೀಕ್, ಕೆದಮುಳ್ಳೂರು ವಿ.ಎಸ್. ಎಸ್. ಎನ್ ನಿರ್ದೇಶಕರಾಗಿ ಚುನಾಯಿತರಾದ ಕುವೇಂಡ ವೈ. ಆಲಿ, ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ನಿರ್ದೇಶಕ ಪುಡಿಯಂಡ ಇ. ಶಾದುಲಿ ಹಾಗೂ ಹಳ್ಳಿಗಟ್ಟು ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಅವರನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.