ಸಾರಾಂಶ
ಹೊನ್ನಾವರ: ಈಗ ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಕೇವಲ ಮೊದಲ ಸ್ಥಾನ ಬರಲು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಕುಟುಂಬದ ಬಗ್ಗೆ ಗೊತ್ತಿಲ್ಲ. ಕುಟುಂಬ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಡಾ.ಜಿ.ಜಿ. ಹೆಗಡೆ ನುಡಿದರು.ಅವರು ಎಸ್.ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆದ ಪ್ರತಿಭೋತ್ಸವ ೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ತಂದೆ, ತಾಯಿ ಹೆಸರು ಕೇಳಿದರೆ ಅವರ ಹೆಸರನ್ನು ಹೇಳಲು ಹಿಂಜರಿಯುವ ಕಾಲದಲ್ಲಿದ್ದೇವೆ. ಈ ಹಿಂದೆ ಮನುಷ್ಯರನ್ನು ಪ್ರೀತಿಸಿ, ವಸ್ತುಗಳನ್ನು ಬಳಸಿಕೊಳ್ಳುತ್ತಿದ್ದೆವು. ಆದರೀಗ ವಸ್ತುಗಳನ್ನು ಪ್ರೀತಿಸಿ, ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ನಮ್ಮ ನೆಲವನ್ನು ಗೌರವಿಸಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಿವಾನಿ ಮಾತನಾಡಿ, ಇದು ಪ್ರೇರಣೆಯನ್ನು ನೀಡುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದಾಗ ಅವರ ಸಂತಸದಲ್ಲಿ ಪಾಲ್ಗೊಳ್ಳಲು ಈ ಕಾರ್ಯಕ್ರಮ ಮಾಡುತ್ತೇವೆ. ಒಳ್ಳೆಯ ವ್ಯಕ್ತಿಗಳಾಗಿ, ಒಂದು ಶಕ್ತಿಯಾಗಿ ಬೆಳೆಯಿರಿ. ಸಾಧನೆಯನ್ನು ಮಾಡಲು ಬೇಕಾದಷ್ಟು ದಾರಿಗಳಿವೆ ಎಂದರು.
೨೦೨೩-೨೪ನೇ ಸಾಲಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ೭೫ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ವೇದಿಕೆ ಮೇಲಿನ ಗಣ್ಯರು ಗೌರವಿಸಿದರು.ಎಂಪಿಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ಗೌರವಕ್ಕೆ ಭಾಜನರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ನುಡಿಗಳನ್ನಾಡಿದರು.
ಇದೇ ವೇಳೆ ಡಾ.ಜಿ.ಜಿ. ಹೆಗಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದೇ ವೇಳೆ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಅಶ್ವಿನಿ ಕಾಮತ್, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ, ಡಾ.ಎಂ.ಪಿ. ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್, ರಿಸರ್ಚ್ ನಿರ್ದೇಶಕ ಡಾ.ಶಿವರಾಮ್ ಶಾಸ್ತ್ರಿ ಉಪಸ್ಥಿತರಿದ್ದರು.
ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ಸ್ವಾಗತಿಸಿದರು. ಕಾಲೇಜಿನ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್.ಡಿ.ಎಂ.ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ್ ವಂದಿಸಿದರು. ಪ್ರಶಾಂತ್ ಹೆಗಡೆ ಹಾಗೂ ವಿನಾಯಕ್ ಭಟ್ ನಿರೂಪಿಸಿದರು.