ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಮೂರು ನಾಡು ವ್ಯಾಪ್ತಿಯ 2ನೇ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಕಂಡಂಗಾಲದ ಅಪ್ಪಂಡೇರಂಡ ತಂಡ ತನ್ನ ಪ್ರಶಸ್ತಿ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಬಿಟ್ಟಂಗಾಲ ಸಮೀಪದ ಕಂಡಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ವತಿಯಿಂದ ಸ್ಥಳೀಯ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಪ್ಪಂಡೇರಂಡ ತಂಡ 5-3 ಗೋಲಿನ ಅಂತರದಿಂದ ಮದ್ರೀರ ತಂಡವನ್ನು ಮಣಿಸಿತು. ಈ ಮೂಲಕ ಸತತ 2ನೇ ಬಾರಿಗೆ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಅಪ್ಪಂಡೇರಂಡ ತಂಡ, ಎದುರಾಳಿ ಆಟಗಾರರ ವಿರುದ್ಧ ಸಂಘಟಿತವಾದ ಆಟವಾಡಿ ಪ್ರಶಸ್ತಿ ಗೆದ್ದುಕೊಂಡಿತು. ಅಪ್ಪಂಡೇರಂಡ ತಂಡದ ಪರವಾಗಿ ಆಡಿದ ಅತಿಥಿ ಆಟಗಾರರು ಇಡೀ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರಲ್ಲದೆ, ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಲಿಖಿತ್ 2 ಗೋಲು, ಆಭರಣ ಸುದೇವ್, ನಿತಿನ್ ಮತ್ತು ಭರತ್ ತಲಾ ಒಂದು ಗೋಲು ಹೊಡೆದರು. ತಂಡದ ವಿರುದ್ಧ ದಾಖಲಾಗಬಹುದಾಗಿದ್ದ ಸಾಕಷ್ಟು ಗೋಲುಗಳನ್ನು ತಡೆಗೋಡೆಯಂತೆ ನಿಂತು ತಡೆದ ಅಪ್ಪಂಡೇರಂಡ ತಂಡದ ಗೋಲ್ ಕೀಪರ್ ಕೌಶಿಕ್ ಸುಬ್ರಮಣಿ, ಪಂದ್ಯಾವಳಿಯ ಸರಣಿ ಪುರುಷೋತ್ತಮ ವಿಶೇಷ ಪ್ರಶಸ್ತಿಗೆ ಪಾತ್ರರಾದರು.
ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ ತರಬೇತುದಾರರಾಗಿ ಮತ್ತು ಅಪ್ಪಂಡೇರಂಡ ಸುರೇಶ್ ವಿಜೇತ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.