ಚಿಕ್ಕಮಗಳೂರು : ರಸ್ತೆ ಸಂಪರ್ಕ ಇಲ್ಲದೆ ವೃದ್ಧೆಯನ್ನು ಆಸ್ಪತ್ರೆಗೆ ಹೊತ್ತೊಯ್ದ ಕುಟುಂಬಸ್ಥರು

| Published : Sep 27 2024, 01:32 AM IST / Updated: Sep 27 2024, 10:17 AM IST

ಚಿಕ್ಕಮಗಳೂರು : ರಸ್ತೆ ಸಂಪರ್ಕ ಇಲ್ಲದೆ ವೃದ್ಧೆಯನ್ನು ಆಸ್ಪತ್ರೆಗೆ ಹೊತ್ತೊಯ್ದ ಕುಟುಂಬಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ನೆಲ್ಲಿಬೀಡು ಗ್ರಾಮದಲ್ಲಿ ಪರ್ಯಾಯ ರಸ್ತೆ ಇಲ್ಲದ ಕಾರಣ ಅನಾರೋಗ್ಯ ಪೀಡಿತ ವೃದ್ಧೆಯನ್ನು ಕುಟುಂಬಸ್ಥರು 3 ಕಿ.ಮೀ. ದೂರದವರೆಗೂ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. 

 ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ಪರ್ಯಾಯ ರಸ್ತೆ ಇಲ್ಲದೇ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಕುಟುಂಬಸ್ಥರು 3 ಕಿ.ಮೀ. ದೂರದವರೆಗೂ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಕಳಸ ತಾಲೂಕಿನ ಕುದುರೆಮುಖ, ಸಂಸೆ, ನಲ್ಲಿಬೀಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿಲ್ಲಿಬೀಡು, ಕಟ್ಟೆಮನೆ, ಅಜ್ಜಿಗದ್ದೆ, ಅರೊಳ್ಳಿ, ಕೋಣೆಮನೆ ಸೇರಿದಂತೆ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಭಾರೀ ಮಳೆಯಿಂದ ನಲ್ಲಿಬೀಡು ಗ್ರಾಮದ ಸಂಪರ್ಕ ಕಡಿತಗೊಂಡ ಪರಿಣಾಮ ಸಂಪರ್ಕಕ್ಕೆ ರಸ್ತೆ ಸೌಲಭ್ಯ ವಿಲ್ಲದ ಕಾರಣಕ್ಕೆ ಬುಧವಾರ ಸಂಜೆ ಅನಾರೋಗ್ಯಕ್ಕೆ ತುತ್ತಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರನ್ನು ಗ್ರಾಮಸ್ಥರು, ಕುಟುಂಬಸ್ಥರು ಸೇರಿ 3 ಕಿ.ಮೀ. ವರೆಗೆ ಹೊತ್ತೊಯ್ದು ನಂತರ ವಾಹನದ ಮೂಲಕ ಕಳಸ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ನೆಲ್ಲಿಬೀಡು ಗ್ರಾಮದ ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತಿದ್ದು, ಈ ಗ್ರಾಮ ಸಂಪರ್ಕಕ್ಕೆ ತೂಗುಸೇತುವೆ ಇದೆ. ಈ ತೂಗು ಸೇತುವೆಯೂ ಶಿಥಿಲಗೊಂಡಿದೆ. ಹಾಗಾಗಿ ಸುಸಜ್ಜಿತ ಸೇತುವೆ ನಿರ್ಮಿಸಬೇಕೆಂದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಪಂದಿಸದ ಪರಿಣಾಮ ನಿವಾಸಿಗಳ ಸೇತುವೆ ಕನಸು ಇಂದಿಗೂ ಮರಿಚೀಕೆಯಾಗಿದೆ.

ಬುಧವಾರ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೂ ಅನಾರೋಗ್ಯ ಪೀಡಿತ ವೃದ್ಧೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲು ದಾರಿ ಮಧ್ಯೆ ಇರುವ ಶಿಥಿಲಗೊಂಡ ಸೇತುವೆ ಮೇಲೆ ಹರಸಾಹಸಪಟ್ಟು ಕರೆದೊಯ್ದಿದ್ದಾರೆ.ಕುಟುಂಬಸ್ಥರು ವೃದ್ದೆಯನ್ನು ಹೊತ್ತು ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೌಲಭ್ಯ ಒದಗಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.