ಸಾರಾಂಶ
ಸಾಮಾಜಿಕ ಬಹಿಷ್ಕಾರದಂತ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದ್ದು ಕ್ಷುಲ್ಲಕ ಕಾರಣಕ್ಕೆ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಾಮಾಜಿಕ ಬಹಿಷ್ಕಾರದಂತ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದ್ದು ಕ್ಷುಲ್ಲಕ ಕಾರಣಕ್ಕೆ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿಯಲ್ಲಿ ನಡೆದಿದೆ.ಬೆಂಡರವಾಡಿ ಗ್ರಾಮದ ರವಿ ಎಂಬಾತನ ಕುಟುಂಬವನ್ನು ಸ್ವಜಾತಿ ಸಮುದಾಯವೇ ಬಹಿಷ್ಕಾರ ಹಾಕಿದ್ದು ಯಾರೂ ಮಾತನಾಡಿಸುತ್ತಿಲ್ಲ- ಯಾರೂ ಕೂಲಿಗೆ ಕರೆಯುತ್ತಿಲ್ಲ, ಯಾರದಾರೂ ಮಾತನಾಡಿಸಿದರೇ ಅವರಿಗೂ ದಂಡ ವಿಧಿಸುತ್ತಾರೆ ಎಂದು ಕುಟುಂಬ ಕಣ್ಣೀರಿಟ್ಟಿದೆ. ರವಿ ತನ್ನ ಪತ್ನಿ ಸವಿತಾ, 8 ವರ್ಷದ ಮಗ ಹಾಗೂ ತಾಯಿ ಮಾದಮ್ಮ ಜೊತೆ ವಾಸ ಮಾಡುತ್ತಿದ್ದು ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದಾರೆ. 7 ತಿಂಗಳ ಹಿಂದೆ ಚೀಟಿಯ ಹಣ ಕೇಳಿದ್ದ ವೇಳೆ ಬೇರೋಬ್ಬರಿಗೆ ನೀಡಿದ್ದರಿಂದ ಕುಪಿತಗೊಂಡು ಜಗಳ ಮಾಡಿದ್ದಾರೆ. ಬಳಿಕ, ಸಮುದಾಯ ಮುಖಂಡರು ನ್ಯಾಯಕ್ಕೆ ಸೇರಿ ರವಿ ಕುಟುಂಬವನ್ನು ಬಹಿಷ್ಕಾರ ಹಾಕಿದ್ದಾರಂತೆ.ಯಾರು ರವಿ ಕುಟುಂಬಸ್ಥರನ್ನ ಮಾತನಾಡಿಸದಂತೆ ಕಟ್ಟಾಜ್ಞೆ ಹೊರಡಿಸಿದ್ದು ಒಂದು ವೇಳೆ ಯಾರಾದ್ರು ಮಾತನಾಡಿಸಿದ್ರೆ ಹಾಗೂ ಅವರನ್ನು ಕೂಲಿಗೆ ಕರೆದುಕೊಂಡು ಹೀದರೆ ಅವರೂ ₹10 ಸಾವಿರ ದಂಡ ಕಟ್ಟಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ.ರವಿ ಅದೇ ಗ್ರಾಮದ ಸವಿತಾ ಎಂಬವರನ್ನು ವಿವಾಹವಾಗಿದ್ದು ಪಕ್ಕದಲ್ಲೇ ಇರೋ ತನ್ನ ತಂದೆ ಮನೆಗೆ ಹೋಗಲಾಗದೆ ರವಿ ಪತ್ನಿ ಸವಿತಾ ಕಣ್ಣೀರು ಇಟ್ಟಿದ್ದಾರೆ. ಸಾಮಾಜಿಕ ಬಹಿಷ್ಕಾರದಿಂದ ಮುಕ್ತಿ ಸಿಗಬೇಕಿದ್ರೆ ₹20 ಸಾವಿರ ದಂಡ ಕಟ್ಟುವಂತೆ ಸಮುದಾಯದ ಯಜಮಾನರು ಹೇಳಿದ್ದು ಲಾರಿ ಚಾಲಕನಾಗಿ ಕೆಲಸ ಮಾಡುವ ತನಗೆ ದಂಡ ಕಟ್ಟಲು ಹಣವಿಲ್ಲದೇ ಊರಲ್ಲಿ ಏಕಾಂಗಿಯಾಗಿದ್ದೇವೆಂದು ರವಿ ಅಳಲು ತೋಡಿಕೊಂಡಿದ್ದಾರೆ.