ಕನ್ನಡಪ್ರಭ ವಾರ್ತೆ ​​ಅಥಣಿ

ಕಲ್ಲು ಗಣಿಗಾರಿಕೆಯ ಧೂಳಿನಿಂದ ತೀವ್ರ ತೊಂದರೆಗೀಡಾಗಿರುವ ಗಸ್ತಿ ಕುಟುಂಬ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬುಧವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿಯೇ ಜಾನುವಾರುಗಳ ಸಮೇತ ಧರಣಿ ನಡೆಸುತ್ತಿದೆ.

ಈ ವೇಳೆ ಸುದ್ದಿಗಾರರೊಂದಿಗೆ ತಮ್ಮ ಅಳಲು ತೋಡಿಕೊಂಡ ರಾಮಪ್ಪ ಗಸ್ತಿ, ಕಳೆದ ಹತ್ತು ವರ್ಷಗಳಿಂದ ಕಲ್ಲು ಗಣಿಗಾರಿಕೆಯ ಧೂಳಿನಿಂದ ನಮ್ಮ ಕುಟುಂಬ ಹೈರಾಣಾಗಿದೆ. ಕುಟುಂಬದ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಗಣಿಗಾರಿಕೆಯಿಂದ ಬರುವ ಧೂಳಿನಿಂದ ನಮ್ಮ ಕುಟುಂಬ ರಕ್ಷಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಧರಣಿ ನಡೆಸುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ನೀಡುವ ಪೊಳ್ಳು ಭರವಸೆಗಳಿಗೆ ನಾವು ಪ್ರತಿಭಟನೆ ಹಿಂಪಡೆಯಲ್ಲ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗುವವರಿಗೆ ನಾವು ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ತಾಲೂಕು ಆಡಳಿತ ಕಚೇರಿ ಆವರಣದಲ್ಲಿಯೇ ಜಾನುವಾರು ಕಟ್ಟಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಸಿದರಾಯ ಭೋಸಗಿ ಪ್ರತಿಭಟನಾಕಾರರನ್ನು ಭೇಟಿಯಾಗಿ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಇಷ್ಟು ವರ್ಷಗಳಿಂದ ಅಧಿಕಾರಿಗಳು ನೀಡುತ್ತಾ ಬಂದಿರುವ ಬಾಯಿಮಾತಿನ ಪೊಳ್ಳು ಭರವಸೆಗಳನ್ನು ನಿರಾಕರಿಸಿದ ಗಸ್ತಿ ಕುಟುಂಬವು, ತಮಗೆ ನ್ಯಾಯಯುತ ಪರಿಹಾರ ಸಿಗುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಸಿಲ್ದಾರ್‌ ಸಿದರಾಯ ಭೋಸಗಿ, ಅಥಣಿ ತಾಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸಮಸ್ಯೆ ತುರ್ತಾಗಿ ಬಗೆಹರಿಸುವ ಸಮಸ್ಯೆ ಅಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸುತ್ತಾರೆ. ನಾವು ಕೂಡ ಸಮಸ್ಯೆ ಮತ್ತು ಕುಟುಂಬಸ್ಥರು ನಡೆಸುವ ಪ್ರತಿಭಟನೆಯ ಬಗ್ಗೆ ಮಾಹಿತಿ ರವಾನಿಸುತ್ತೇವೆ. ಸಮಸ್ಯೆ ಮತ್ತು ಪರಿಹಾರಕ್ಕೆ ಹೋರಾಟ ಮತ್ತು ಧರಣಿ ನಡೆಸುವುದು ಅವರ ಮೂಲಭೂತ ಹಕ್ಕಾಗಿದೆ. ನಾನು ಆ ಕುಟುಂಬದವರಿಗೆ ಬಿಸಿಲಿನ ಉಷ್ಣಾಂಶ ಅಧಿಕ ಇರುವದರಿಂದ ನೆರಳಿನಲ್ಲಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದ್ದೇನೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.---------