ಗಜೇಂದ್ರಗಡ ಬಳಿ ಗಾಳಿಯ ರಭಸಕ್ಕೆ ಮುರಿದು ಬಿದ್ದ ಫ್ಯಾನಿನ ರೆಕ್ಕೆ

| Published : May 23 2025, 12:21 AM IST

ಸಾರಾಂಶ

ಗಜೇಂದ್ರಗಡ ಪಟ್ಟಣ ಸಮೀಪದ ಕಾಲಕಾಲೇಶ್ವರ ಗ್ರಾಮದ ರುದ್ರಪಾದದ ಗುಡ್ಡದ ಮೇಲೆ ಅಳವಡಿಸಿರುವ ಖಾಸಗಿ ಕಂಪನಿಯ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಫ್ಯಾನಿನ ರೆಕ್ಕೆ ಗಾಳಿ ರಭಸಕ್ಕೆ ಮುರಿದು ಬಿದ್ದಿದೆ.

ಗಜೇಂದ್ರಗಡ: ಪಟ್ಟಣ ಸಮೀಪದ ಕಾಲಕಾಲೇಶ್ವರ ಗ್ರಾಮದ ರುದ್ರಪಾದದ ಗುಡ್ಡದ ಮೇಲೆ ಅಳವಡಿಸಿರುವ ಖಾಸಗಿ ಕಂಪನಿಯ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಫ್ಯಾನಿನ ರೆಕ್ಕೆ ಗಾಳಿ ರಭಸಕ್ಕೆ ಮುರಿದು ಬಿದ್ದಿದೆ.

ಸುಮಾರು ೧೫ ವರ್ಷದ ಹಿಂದೆ ಅಳವಡಿಸಿದ್ದ ವಿದ್ಯುತ್‌ ಉತ್ಪಾದಿಸುವ ಗಾಳಿಯಂತ್ರದ ರೆಕ್ಕೆ ಬುಧವಾರ ಬೀಸಿದ ಗಾಳಿಗೆ ಮುರಿದು ಬಿದ್ದಿದೆ. ಈ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ವೈರಲ್‌ ಆಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶಿ ಪ್ರಖ್ಯಾತಿ ಪಡೆದಿರುವ ಕಾಲಕಾಲೇಶ್ವರ ದೇವಸ್ಥಾನಕ್ಕೆ ನೂರಾರು ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಮಳೆಗಾಲ ಸಂದರ್ಭದಲ್ಲಿ ಕಾಲಕಾಲೇಶ್ವರ ದೇವಸ್ಥಾನ ಹಾಗೂ ರುದ್ರಪಾದದ ಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಹೀಗಾಗಿ ಆ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಾರೆ. ಆದರೆ ಫ್ಯಾನ್‌ ರೆಕ್ಕೆ ಮುರಿದು ಬೀಳುವ ವೇಳೆ ಯಾವುದೇ ಪ್ರವಾಸಿಗರು ಅಲ್ಲಿ ಇರಲಿಲ್ಲ.

ಅವಘಡವಾದರೆ ಹೊಣೆ ಯಾರು?

ಗಜೇಂದ್ರಗಡ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಈಗ ಗಾಳಿಯಂತ್ರಗಳ ಹಾವಳಿ ಜೋರಾಗಿದೆ. ಈ ಘಟನೆ ಸಾರ್ವಜನಿಕರು ಹಾಗೂ ರೈತರಲ್ಲಿ ಭಯ ಮೂಡಿಸಿದೆ. ಈ ಭಾಗದಲ್ಲಿ ರೈತರ ಫಲವತ್ತಾದ ಜಮೀನು ಹಾಗೂ ಗುಡ್ಡ ಪ್ರದೇಶದಲ್ಲಿ ಗಾಳಿಯಂತ್ರ ಅಳವಡಿಸಲಾಗಿದೆ. ಈ ಫ್ಯಾನ್‌ ಅಡಿಯಲ್ಲೇ ಕೃಷಿ ಚಟುವಟಿಕೆ ನಡೆಯುತ್ತದೆ. ಜನಸಂಚಾರವಿರುತ್ತದೆ. ರಭಸದ ಗಾಳಿಗೆ ಫ್ಯಾನಿನ ರೆಕ್ಕೆ ಮುರಿದ ಬಿದ್ದರೆ ಗತಿಯೇನು? ಅನಾಹುತಗಳಿಗೆ ಹೊಣೆ ಯಾರು? ಫ್ಯಾನ್‌ ನಿರ್ವಹಣೆ ಹೇಗೆ? ಎಷ್ಟು ವರ್ಷ ಇರುತ್ತದೆ? ಎಂಬೆಲ್ಲ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

೧೫ ವರ್ಷಗಳ ಹಿಂದೆ ಕಾಲಕಾಲೇಶ್ವರ ಗ್ರಾಮದ ರುದ್ರಪಾದದ ಗುಡ್ಡದ ಮೇಲೆ ಅಳವಡಿಸಿದ್ದ ಫ್ಯಾನಿನ ನಿರ್ವಹಣೆ ಯಾರು ಮಾಡುತ್ತಿದ್ದರು? ಮಾಡುತ್ತಿದ್ದರೆ ಹೀಗೆ ಏಕಾಯಿತು? ಮುಂದೆ ಇಂತಹ ಘಟನೆಗಳು ನಡೆದಾಗ ಪ್ರಾಣಹಾನಿಯಂತಹ ಅವಘಡಗಳು ನಡೆದರು ಯಾರು ಜವಾಬ್ದಾರರು ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಉತ್ತರ ನೀಡಬೇಕಿದೆ.

ಕಾಲಕಾಲೇಶ್ವರ ಗ್ರಾಮದ ರುದ್ರಪಾದದ ಗುಡ್ಡದ ಮೇಲಿನ ಫ್ಯಾನಿನ ರೆಕ್ಕೆ ಗಾಳಿಯ ರಭಸಕ್ಕೆ ಮುರಿದು ಬಿದ್ದಿದೆ. ಫ್ಯಾನಿನ ಸೂಕ್ತ ನಿರ್ವಹಣೆ ಆಗಿದ್ದರೆ ಹೀಗೆ ಆಗುತ್ತಿತ್ತಾ ಎನ್ನುವ ಪ್ರಶ್ನೆಗೆ ಉತ್ತರದ ಜತೆಗೆ, ಮುಂದೆ ಇಂತಹ ಘಟನೆ ಆಗದಂತೆ ಸ್ಥಳೀಯ ಆಡಳಿತ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕಿದೆ ಎಂದು ರಾಜೂರ ಮಾಜಿ ಗ್ರಾಪಂ ಸದಸ್ಯ, ಕಾಲಕಾಲೇಶ್ವರ ಪರಶುರಾಮ ಚಿಲ್‌ಝರಿ ಹೇಳಿದರು.