ಅಭಿಮಾನ ಮತವಾಗಿ ಬದಲಾಗುತ್ತದೆ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

| Published : Apr 21 2024, 02:19 AM IST

ಅಭಿಮಾನ ಮತವಾಗಿ ಬದಲಾಗುತ್ತದೆ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಕ್ಕೆ ಬಂದವರಿಗೆ ಈ ಭಾಗದಲ್ಲಿ ಒಂದು ರೈಲು ಆರಂಭವಾಗಿ 10 ವರ್ಷ ಕಳೆದರೂ ಇನ್ನೊಂದು ರೈಲು ತರಲಾಗಲಿಲ್ಲ. ಪಕ್ಷದ ಜನರೇ ‘ಗೋ ಬ್ಯಾಕ್‌’ ಎಂದು ಹೇಳಿ ಅವರು ಕ್ಷೇತ್ರವನ್ನೇ ತೊರೆದು ಹೋಗುವಂತಾಯಿತು. ಅಭಿವೃದ್ಧಿ ಮಾಡಿದ್ದರೆ ಜನರು ಚುನಾವಣೆ ಬಂದಾಗ ಸ್ಮರಿಸುತ್ತಾರೆ ಎಂದು ಜೆಪಿ ಹೆಗ್ಡೆ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತಯಾಚನೆಯ ವೇಳೆ ಜನರು ಅಪಾರ ಅಭಿಮಾನ, ಪ್ರೀತಿ, ಪ್ರೋತ್ಸಾಹ ನೀಡಿದ್ದಾರೆ. ಈ ಅಭಿಮಾನ ಮತ್ತು ಪ್ರೀತಿ ಮತವಾಗಿ ಬದಲಾಗುತ್ತದೆ ಎಂಬ ನಂಬಿಕೆ ಇದೆ. ಜನ ಬದಲಾವಣೆ ಬಯಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಬಡವರ ಬದುಕಿಗೆ ನೆರವಾದ ಐದು ಗ್ಯಾರಂಟಿಗಳೇ ಕಾರಣ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದ ಬೃಹತ್‌ ಜಾಥಾದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಳೆದ 4 ದಶಕಗಳಿಂದ ರಾಜಕೀಯದಲ್ಲಿರುವ ನನಗೆ ಜನರು ಅಪಾರ ಪ್ರೀತಿ ತೋರಿಸುತ್ತಿರುವುದಕ್ಕೆ ಕೇವಲ 20 ತಿಂಗಳ ಕಾಲ ಸಂಸದನಾಗಿ ನಾನು ಮಾಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳೇ ಕಾರಣ. ನಂತರ ಅಧಿಕಾರಕ್ಕೆ ಬಂದವರಿಗೆ ಈ ಭಾಗದಲ್ಲಿ ಒಂದು ರೈಲು ಆರಂಭವಾಗಿ 10 ವರ್ಷ ಕಳೆದರೂ ಇನ್ನೊಂದು ರೈಲು ತರಲಾಗಲಿಲ್ಲ. ಪಕ್ಷದ ಜನರೇ ‘ಗೋ ಬ್ಯಾಕ್‌’ ಎಂದು ಹೇಳಿ ಅವರು ಕ್ಷೇತ್ರವನ್ನೇ ತೊರೆದು ಹೋಗುವಂತಾಯಿತು. ಅಭಿವೃದ್ಧಿ ಮಾಡಿದ್ದರೆ ಜನರು ಚುನಾವಣೆ ಬಂದಾಗ ಸ್ಮರಿಸುತ್ತಾರೆ. ಚಿಕ್ಕಮಗಳೂರಿನ ಬೀದಿಗಳಲ್ಲಿ ಮತಯಾಚನೆ ಮಾಡುವಾಗ ಜನ ತೋರುತ್ತಿರುವ ಪ್ರೀತಿಯನ್ನು ಕಂಡಾಗ ಗೆಲ್ಲುವ ಆತ್ಮವಿಶ್ವಾಸ ಮೂಡಿದೆ ಎಂದರು.

ಜನಪ್ರತಿನಿಧಿಯಾಗಿ ಅಡಕೆ ಬೆಳೆಗಾರರಿಗೆ ಮಾಡಿದ ನೆರವು, ಕಾಂಗ್ರೆಸ್‌ ಸರ್ಕಾರದ ಕೃಷಿಕರಿಗೆ ಪೂರಕವಾದ ಯೋಜನೆಗಳು ಮತ ಕೇಳಲು, ಮತದಾರರೊಂದಿಗೆ ಚರ್ಚಿಸಲು ಸಾಧ್ಯವಾಗಿದೆ. ಆದ್ದರಿಂದ ಉಡುಪಿ- ಚಿಕ್ಕಮಗಳೂರಿನ ಮತದಾರರು ಜಯಕ್ಕೆ ಹಾರೈಸುತ್ತಿದ್ದಾರೆ. ಇದು ಯಶಸ್ಸಿನ ಹಾದಿಗೆ ನೆರವಾಗುತ್ತದೆ ಎಂದು ಹೇಳಿದರು.

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯ ಮಹಿಳೆಯರ ನೆಮ್ಮದಿ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಮಾಜಿ ಮುಖ್ಯಮಂತ್ರಿಗಳು ಈ ಗ್ಯಾರಂಟಿಯಿಂದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಲೇವಡಿ ಮಾಡಿರುವುದು ಖಂಡನೀಯ. ಏ.26ರಂದು ಜನತೆ ಇದಕ್ಕೆ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್‌ ಸರ್ಕಾರ ನೀಡಿರುವ ಗ್ಯಾರಂಟಿಗಳಿಂದ ಅಭಿವೃದ್ಧಿ ಮರೆತ ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಸೋಲಿನ ಆತಂಕ ಕಾಡಿದಾಗ ಲೇವಡಿಯೇ ಅಸ್ತ್ರವಾಗುತ್ತದೆ ಎಂದರು.

ಮಾಜಿ ಶಾಸಕರಾದ ಮೋಟಮ್ಮ, ಎಂ.ಪಿ. ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್‌ನ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.