ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾವು ತಲೆ ಎತ್ತಿಕೊಂಡು ಓಡಾಡಲು ಆಗುತ್ತದೆ ಅಂದರೆ ಅವರೇ ಕಾರಣ. ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಅಭಿಮಾನಿಗಳು ಈವರೆಗೆ ಮಾಡಿಲ್ಲ. ಎಂದೂ ಮಾಡುವುದೂ ಇಲ್ಲ’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.ಬೆಂಗಳೂರಿನ ಜಯನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಸುದೀಪ್ ಅಭಿಮಾನಿಗಳು ಸೋಮವಾರ ಹಮ್ಮಿಕೊಂಡಿದ್ದ ‘ಕಿಚ್ಚ ಸುದೀಪ್ ಜನ್ಮದಿನ ಆಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಹಸ್ರಾರು ಅಭಿಮಾನಿಗಳ ಎದುರಿಗೆ ಕೇಕ್ ಕತ್ತರಿಸಿ ಮಾತನಾಡಿದ ಅವರು, ‘ನಾನು ಮೇಕಪ್ ಹಾಕೋದು ಅಭಿಮಾನಿಗಳಿಗೋಸ್ಕರ. ಎಲ್ಲಿಯವರೆಗೆ ಅಭಿಮಾನಿಗಳಾದ ನೀವು ನನ್ನನ್ನು ನೋಡೋದಕ್ಕೆ ಇಷ್ಟಪಡುತ್ತಿರೋ ಅಲ್ಲಿಯವರೆಗೆ ನಿಮಗೋಸ್ಕರ ದುಡಿಯುತ್ತೇನೆ. ಜನ್ಮದಿನದ ರಾತ್ರಿ 12 ಗಂಟೆಗೆ ನೀವು ಹಾಕುವ ಕೂಗು ನಮ್ಮ ಅಹಂಕಾರವನ್ನೆಲ್ಲ ಇಳಿಸಿ ನಾವು ಮನುಷ್ಯರಾಗಿ ತಗ್ಗಿ ಬಗ್ಗಿ ಕೆಲಸ ಮಾಡುವಂತೆ ಮಾಡುತ್ತದೆ. ನಾನು ನಿಮ್ಮೊಳಗೊಬ್ಬ’ ಎಂದು ಹೇಳಿದರು.
‘ನಾವು ಯಾವ ಎತ್ತರಕ್ಕೆ ಬೆಳೆಯುತ್ತೇವೆ ಅನ್ನುವುದು ದೊಡ್ಡದಲ್ಲ. ಯಾವ ವಾತಾವರಣದಲ್ಲಿ ಬೆಳೆಯುತ್ತೇವೆ ಅನ್ನೋದು ಮುಖ್ಯ. ನನ್ನ ಫ್ಯಾನ್ಸ್‌ಗಳಲ್ಲಿ ಒಳ್ಳೆತನ ಇದೆ. ಅದಕ್ಕೆ ನಾವಿಷ್ಟು ಒಳ್ಳೆಯವರಾಗಿರಲು ಸಾಧ್ಯವಾಗಿದೆ. ನನ್ನಿಂದಾಗಿ ಅಭಿಮಾನಿಗಳು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬುದು ಸರಿಯಲ್ಲ. ಅವರಲ್ಲಿ ಒಳ್ಳೆತನವಿದೆ. ಅವರು ಮಾಡುವ ಒಳ್ಳೆಯ ಕೆಲಸಗಳ ಶ್ರೇಯಸ್ಸು ಅವರ ತಂದೆ-ತಾಯಿಗೆ, ಊರಿನವರಿಗೆ ಸಲ್ಲುತ್ತದೆ. ಅಭಿಮಾನಿಗಳು ತೋರುವ ಪ್ರೀತಿಯಲ್ಲಿ ಶೇ.1ರಷ್ಟಾದರೂ ನಾವು ಅವರಿಗೆ ಮರಳಿ ನೀಡಲು ಸಾಧ್ಯವಾದರೆ ಅದೇ ದೊಡ್ಡದು’ ಎಂದರು.ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯ ಸಾವಿರಾರು ಸುದೀಪ್ ಅಭಿಮಾನಿಗಳು ಪಾಲ್ಗೊಂಡಿದ್ದರು. ಇದಲ್ಲದೇ ತಮ್ಮ ನೆಚ್ಚಿನ ನಾಯಕನ ಜನ್ಮದಿನದ ನಿಮಿತ್ತ ಅನೇಕರು ಸಮಾಜ ಸೇವಾ ಕಾರ್ಯಗಳನ್ನೂ ಮಾಡಿದರು. ಹುಟ್ಟುಹಬ್ಬದ ಮಧ್ಯರಾತ್ರಿ ಸುದೀಪ್ ಮನೆಯ ಸಮೀಪವೂ ಅಭಿಮಾನಿಗಳು ಹೋಗಿದ್ದು, ಈ ಸಂದರ್ಭದಲ್ಲಿ ಸುದೀಪ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.