ಯಾವುದಾದರೊಂದು ರಸ್ತೆಗೆ ಕಸಾಪ ಮಾಜಿ ಅಧ್ಯಕ್ಷ ಹನುಮಂತೇಗೌಡರ ಹೆಸರಿಡಲು ಹಾಸನದಲ್ಲಿ ಅಭಿಮಾನಿಗಳ ಒತ್ತಾಯ

| Published : Oct 09 2024, 01:31 AM IST

ಯಾವುದಾದರೊಂದು ರಸ್ತೆಗೆ ಕಸಾಪ ಮಾಜಿ ಅಧ್ಯಕ್ಷ ಹನುಮಂತೇಗೌಡರ ಹೆಸರಿಡಲು ಹಾಸನದಲ್ಲಿ ಅಭಿಮಾನಿಗಳ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರಾದ ಮಾ. ಹನುಮಂತೇಗೌಡ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಹನುಮಂತೇಗೌಡರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಾ.ಹನುಯ್ತೇಗೌಡರ ನಿಧನಕ್ಕೆ ಸಂತಾಪಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರಾದ ಮಾ. ಹನುಮಂತೇಗೌಡ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಹನುಮಂತೇಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಾಹಿತ್ಯಾಭಿಮಾನಿಗಳು, ಹಾಸನ ನಗರದ ಒಂದು ರಸ್ತೆಗೆ ಹನುಮಂತೇಗೌಡರ ಹೆಸರು ಇಡುವಂತೆ ಸಂತಾಪ ಸಭೆಯಲ್ಲಿ ಒತ್ತಾಯಿಸಿದರು.ಹನುಮಂತೇಗೌಡರಿಗೆ ೯೦ ವರ್ಷ ವಯಸ್ಸಾಗಿತ್ತು. ಇವರು ಕಸಾಪದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾಷೆ ಪಂಡಿತರಾಗಿದ್ದರು. ನಂತರ ಪ್ರೌಢಶಾಲೆಗೆ ಬಡ್ತಿ ಹೊಂದಿ ಪ್ರೌಢಶಾಲೆಯಲ್ಲಿ ಭಾಷೆ ಪಂಡಿತರಾಗಿ ಸೇವೆ ಸಲ್ಲಿದ್ದರು. ಇವರು ಇಬ್ಬರು ಗಂಡು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಜಯನಗರದ ಭಗತ್ ಸಿಂಗ್ ರಸ್ತೆ, ಎರಡನೇ ಅಡ್ಡ ರಸ್ತೆ, ಜಯನಗರ ಎರಡನೇ ಹಂತ, ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡುತ್ತಾ, ಮಾ.ಹನುಮಂತೇಗೌಡ ಸರಳ ಸಜ್ಜನಿಕೆಗೆ ಹೆಸರಾದವರು. ಇವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಹೊಸ ಕಾಯಕಲ್ಪ ನೀಡಿದ್ದರು. ಇವರ ನಡೆ, ನುಡಿ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದರು. ನಂತರ ಮಾತನಾಡಿದ ಕಸಾಪ ನಿಕಟಪೂರ್ವ ಗೌರವಾಧ್ಯಕ್ಷರಾದ ರವಿನಾಕಲಗೂಡು, ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾ.ಹನುಮಂತೇಗೌಡರು ದೊಡ್ಡ ಅಸ್ತಿಯಾಗಿದ್ದರು. ಇವರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ನಿವೇಶನ ದೊರೆಯುವಂತಾಯಿತು. ಈ ನಿವೇಶನದ ಮೌಲ್ಯ ೫೦ ಕೋಟಿಯಷ್ಟು ಇದೆ ಎಂದರು. ನಂತರ ಸಾಹಿತಿ ಚಂದ್ರಕಾಂತ ಪಡೆಸೂರ ಮಾತನಾಡುತ್ತಾ, ಇವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಚ್.ಬಿ. ಜ್ವಾಲನಯ್ಯನವರು ರಾಜ್ಯಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ನಾನು ರಾಜ್ಯ ಗೌರವ ಕಾರ್ಯದರ್ಶಿಯಾಗಿದ್ದೆ. ಅ ಸಂದರ್ಭದಲ್ಲಿ ಇವರ ನಡೆ ನುಡಿ ಗಮನಿಸಿದ್ದು, ಇವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆ ಅನನ್ಯ ಎಂದರು. ನಂತರ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ.ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಮಾ.ಹನುಮಂತೇಗೌಡ ಇವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಇವರ ಹೆಸರನ್ನು ನಗರದ ಒಂದು ರಸ್ತೆಗೆ ನಾಮಕರಣ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದರು. ಇಡೀ ರಾಜ್ಯದಲ್ಲೆ ಇಷ್ಟು ದೊಡ್ಡ ನಿವೇಶನ ಇಲ್ಲ. ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮಾಡಿದ ಸಾಧನೆ ಅವಿಸ್ಮರಣೀಯ ಎಂದು ನುಡಿದರು. ಇದಕ್ಕೆ ಮೊದಲು ಮೊದಲು ಮಾ.ಹನುಮಂತೇಗೌಡರಿಗೆ ಒಂದು ನಿಮಿಷ ಮೌನ ಆಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ಅಭಿಮಾನಿಗಳು, ಹಿತೈಸಿಗಳು ಪ್ರಾರ್ಥಿವ ಶರೀರಕ್ಕೆ ಹೂವನ್ನು ಹಾಕಿ ನಮನ ಸಲ್ಲಿಸಿದರು. ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಮಾವಿನಹಳ್ಳಿ ವಾಸು, ಹೆತ್ತೂರು ನಾಗರಾಜು, ಬೋಮ್ಮೇಗೌಡ, ಜಾವಗಲ್ ಪ್ರಸನ್ನ ಕುಮಾರ, ಕಟ್ಟಾಯ ಶಿವಕುಮಾರ್, ಎಚ್.ಎಂ. ಶಿವಣ್ಣ, ಎನ್.ಎಲ್ ಚನ್ನೇಗೌಡ, ತೌಫಿಕ್ ಅಹ್ಮದ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಮುಂತಾದವರು ಸಂತಾಪ ಸೂಚಿಸಿದರು.