ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಡಾ.ಪಿ.ನಾಗೇಂದ್ರ ಹಾಗೂ ಪುಟ್ಟಲಿಂಗಯ್ಯರಿಗೆ ಬೀಳ್ಕೊಡುಗೆ ನೀಡಲಾಯಿತು.ಬಿಇಟಿ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಉಪನ್ಯಾಸಕ, ಸಂಶೋಧಕ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ಡಾ.ಪಿ.ನಾಗೇಂದ್ರ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಭಾರತೀಕಾಲೇಜಿನಲ್ಲಿ 2004ರಲ್ಲಿ ಡಾ.ಪಿ.ನಾಗೇಂದ್ರ ಅವರ ಪರಿಚಯವಾಯಿತು. ಆಗ ಇವರ ಬಗ್ಗೆ ವಿದ್ಯಾರ್ಥಿಗಳು, ಸಹಪಾಠಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದುದ್ದು ನಾನು ನೋಡಿದೆ. ಕಾಲೇಜಿನಲ್ಲಿ ಮೊದಲ ಬಾರಿಗೆ 2008ರಲ್ಲಿ 2 ವಿಷಯಗಳಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಲು ಕಾರಣೀಭೂತರಾದರು ಎಂದರು.40ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜ್ಞಾನ ನಿಯತ ಕಾಲಿಕೆ ಸಂಪಾದಕರಾಗಿ ಯುಜಿಸಿ ಅನುದಾನವನ್ನು ತಂದಿದ್ದಾರೆ. ಪರೀಕ್ಷಾ ನಿಯಂತ್ರಕರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತೀ ಕಾಲೇಜನ್ನು ಸ್ವಾಯತ್ತ ಕಾಲೇಜಾಗಿ ಪರಿವರ್ತನೆಗೊಳಿಸಲು ಶ್ರಮಿಸಿದ್ದಾರೆಂದು ಶ್ಲಾಘಿಸಿದರು.
ಪ್ರಾಂಶುಪಾಲರು ಪುಟ್ಟಲಿಂಗಯ್ಯ ಅವರು ಕಿರುಗಾವಲು ಭಾರತೀ ಪದವಿಪೂರ್ವ ಕಾಲೇಜಿನಲ್ಲಿ ಸೇವೆಸಲ್ಲಿಸಿ ನಿವೃತ್ತಿಗೊಳ್ಳುತ್ತಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿಲಿ ಎಂದು ಆಶಿಸಿದರು.ನಿವೃತ್ತ ಪ್ರಾಧ್ಯಾಪಕ ಶಂಕರಲಿಂಗೇಗೌಡ, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಪ್ರೊ.ಮಹದೇವಸ್ವಾಮಿ, ಕನ್ನಡ ಪ್ರಾಧ್ಯಾಪಕಿ ಡಾ.ಜಿ.ಎಂ.ಲಕ್ಷ್ಮೀ ಮಾತನಾಡಿದರು. ಡಾ.ಪಿ.ನಾಗೇಂದ್ರ ಹಾಗೂ ಪುಟ್ಟಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ನಂತರ ವಿವಿಧ ಅಂಗಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ನಿವೃತ್ತ ಪ್ರಾಂಶುಪಾಲರು, ಸಹಪಾಠಿಗಳು, ಸಿಬ್ಬಂದಿ ವರ್ಗದವರು ಅಭಿನಂದಿಸಿ ಗೌರವಿಸಿದರು.
ವೇದಿಕೆಯಲ್ಲಿ ಬಿಇಟಿ ಸಿಇಒ ಆಶಯ್ ಜಿ.ಮಧು, ಟ್ರಸ್ಟಿಗಳಾದ ಸಿದ್ದೇಗೌಡ, ಮುದ್ದೇಗೌಡ, ಜಯರಾಮು, ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ನಾಗರಾಜು ಸೇರಿ ಹಲವರಿದ್ದರು.