ಸರ್ಕಾರದ ಸೇವೆಯಲ್ಲಿ ವಯೋನಿವೃತ್ತಿ ಸಹಜ ಎಂದು ಗ್ರಾ.ಪಂ. ಅಧ್ಯಕ್ಷ ಪಿ. ಆರ್‌. ಸುನಿಲ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸರ್ಕಾರ ಸೇವೆಯಲ್ಲಿ ವಯೋನಿವೃತ್ತಿ ಸಹಜ. ಆದರೆ ನಿಮ್ಮ ಶಿಕ್ಷಣ ವೃತ್ತಿ ಜೀವನವನ್ನು ಕೊನೆಗೊಳಿಸದೆ ಸಮಾಜ ಸೇವೆ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನೀಡಬೇಕು ಎಂದು ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹೇಳಿದರು. ಶನಿವಾರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಸಿ.ಎ.ಗೀತಾ ಪಾರ್ಥ, ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಇತರರೊಂದಿಗೆ ಸದಾಗೌರವ ಹಸನ್ಮುಮುಖಿಯಾಗಿರುವ ಗೀತಾ ಅವರು ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ರೂಪುಗೊಳಿಸಿದ್ದು, ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಏರಿಕೆಗೊಳಿಸುವಲ್ಲಿಯೂ ಅವರ ಪರಿಶ್ರಮ ಅಪರಿಮಿತವಾಗಿದೆ. ಅಲ್ಲದೆ ಶಾಲೆಯ ಅಭಿವೃದ್ಧಿಗೆ ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡಿರುವುದು ಆಶಾದಾಯಕ ವಿಚಾರವಾಗಿದೆ ಎಂದರು. ಸಹಶಿಕ್ಷಕರಿಗೆ ಪಠ್ಯದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಪ್ರೇರೇಪಿಸುವ ಮೂಲಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಮುಖ್ಯ ಶಿಕ್ಷಕಿ ಗೀತಾ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಗ್ರಾ.ಪಂ.ಸದಸ್ಯ ರಫೀಕ್‌ಖಾನ್ ವಹಿಸಿ ಮಾತನಾಡಿದ ಅವರು ಮುಖ್ಯ ಶಿಕ್ಷಕಿ ಗೀತಾ ಅವರು ಕಳೆದ 5 ವರ್ಷಗಳಿಂದ ಉತ್ತಮವಾದ ಒಡನಾಟವನ್ನು ಹೊಂದಿದ್ದು ಮುಖ್ಯ ಶಿಕ್ಷಕಿಯವರು ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು, ಇಂದು ಸರ್ಕಾರಿ ಶಾಲೆಯ ಮಕ್ಕಳ ಸಂಖ್ಯೆ ಏರಿಕೆಗೊಳ್ಳಲು ಗುಣಮಟ್ಟದ ಶಿಕ್ಷಣಕ್ಕೆ ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆಂದು ಅವರ ಸೇವೆಯನ್ನು ಸ್ಮರಿಸಿದರು. ಸಮಾರಂಭದ ವೇದಿಕೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಜೀನಾಸುದ್ಧಿನ್, ಪ್ರಸಾದ್‌ಕುಟ್ಟಪ್ಪ, ಪಿ.ಎಫ್.ಸಬಾಸ್ಟೀನ್, ಸೋಮನಾಥ್, ಆಲಿಕುಟ್ಟಿ, ಶಾಂತಿ, ವಸಂತಿ, ರೇಷ್ಮ, ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಾಲಕೃಷ್ಣ, ಸಹಶಿಕ್ಷಕಿ ಚಿತ್ರ, ಪ್ರಕಾಶ್, ಕಾನ್‌ಬೈಲ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶಾಂತಿ, ಅತ್ತೂರು ನಲ್ಲೂರು ಶಾಲೆಯ ಮುಖ್ಯೋಪಾಧ್ಯಾಯನಿ ನಯನ, 7ನೇ ಹೊಸಕೋಟೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಕೆ.ಕೆ.ಹೇಮಾವತಿ, ಗದ್ದೆಹಳ್ಳ ಸಂಯುಕ್ತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಹೇಮಲತಾ, ವಿವಿಧ ಶಾಲೆಯ ಸಹಶಿಕ್ಷಕರು, ನಿವೃತ್ತ ಮುಖ್ಯೋಪಾಧ್ಯಾಯನಿ ಮನೋಹರಿ ಸೇರಿದಂತೆ ನಿವೃತ್ತ ಸಹ ಶಿಕ್ಷಕರು ಉಪಸ್ಥಿತರಿದ್ದರು.