ಸಾರಾಂಶ
ಕುಗ್ರಾಮಗಳಲ್ಲಿ ಕೆಲಸ ಮಾಡಲು ಶಿಕ್ಷಕರು ಒಪ್ಪದ ಸಮಯದಲ್ಲೂ ಸುಮಾರು 23 ವರ್ಷಗಳ ಹಿಂದೆ ದಂಪತಿ ಸಮೇತರಾಗಿ ಈ ಗ್ರಾಮದಲ್ಲಿ ನೆಲೆಸಿ ಇಲ್ಲಿಯ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಅಂತಹ ಕ್ರಿಯಾಶೀಲ ಹೃದಯ ವೈಶಾಲ್ಯ ಇರುವ ಶಿಕ್ಷಕರು ವಯೋ ನಿವೃತ್ತಿ ಹೊಂದುತ್ತಿರುವುದು ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟ.
ಕನ್ನಡಪ್ರಭ ವಾರ್ತೆ ಹಲಗೂರು
ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನರಸಿಂಹೇಗೌಡರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.ಸಮಾರಂಭದ ಅಂಗವಾಗಿ ಗ್ರಾಮದ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಪೂರ್ಣ ಕುಂಭದೊಡನೆ ಮೆರವಣಿಗೆ ಮುಖಾಂತರ
ನಿವೃತ್ತ ಶಿಕ್ಷಕ ನರಸಿಂಹೇಗೌಡ ಮತ್ತು ಅವರ ಧರ್ಮಪತ್ನಿ ಮಾದೇವಮ್ಮ ಅವರನ್ನು ವಾದ್ಯಗೋಷ್ಠಿಯಲ್ಲಿ ಶಾಲಾ ಆವರಣಕ್ಕೆ ಕರೆತಂದು ಗ್ರಾಮಸ್ಥರು ಹಾಗೂ ಶಾಲಾ ವತಿಯಿಂದ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ನರಸಿಂಹೇಗೌಡ ಮಾತನಾಡಿ, ಪ್ರಸಿದ್ಧ ಬಸವನ ಬೆಟ್ಟದ ಪ್ರಕೃತಿ ಸೌಂದರ್ಯದ ನಡುವೆ ಇಲ್ಲಿನ ಜನರ ಪ್ರೀತಿ ಬಾಂಧವ್ಯ ಹಾಗೂ ಸಹಕಾರದಿಂದ 23 ವರ್ಷ ಸೇವೆ ಸಲ್ಲಿಸಿದ್ದೇನೆ. ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳುತ್ತಾ ದುಃಖಿತರಾದರು.
ಶಿಕ್ಷಣ ಸಮನ್ವಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕುಗ್ರಾಮಗಳಲ್ಲಿ ಕೆಲಸ ಮಾಡಲು ಶಿಕ್ಷಕರು ಒಪ್ಪದ ಸಮಯದಲ್ಲೂ ಸುಮಾರು 23 ವರ್ಷಗಳ ಹಿಂದೆ ದಂಪತಿ ಸಮೇತರಾಗಿ ಈ ಗ್ರಾಮದಲ್ಲಿ ನೆಲೆಸಿ ಇಲ್ಲಿಯ ಮಕ್ಕಳಿಗೆ ಶಿಕ್ಷಣವನ್ನುಧಾರೆ ಎರೆದಿದ್ದಾರೆ. ಅಂತಹ ಕ್ರಿಯಾಶೀಲ ಹೃದಯ ವೈಶಾಲ್ಯ ಇರುವ ಶಿಕ್ಷಕರು ವಯೋ ನಿವೃತ್ತಿ ಹೊಂದುತ್ತಿರುವುದು ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟ ಎಂದರು.
ಇಲ್ಲಿಯ ಗ್ರಾಮಸ್ಥರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಅಕ್ಕಪಕ್ಕದ ತಾಲೂಕಿನ ಶಿಕ್ಷಕರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಿರುವುದು ಅವರ ಸಾಧನೆಗೆ ಸೇವೆಗೆ ತಕ್ಕ ಪ್ರತಿಫಲ. ಈ ಶಾಲೆ ಮಕ್ಕಳಲ್ಲಿ ಕಲಿಕೆ ಮಟ್ಟ ಉತ್ತಮವಾಗಿದ್ದು ಖಾಸಗಿ ಶಾಲೆಗಳಿಗಿಂತ ಮೀರಿದ ಜ್ಞಾನವನ್ನು ಪಡೆದಿದ್ದು, ನರಸಿಂಹೇಗೌಡ ಮತ್ತು ಗೋಪಾಲ್ ಶಿಕ್ಷಕರು ಕೈಗೊಂಡಿರುವ ಶೈಕ್ಷಣಿಕ ಚಟುವಟಿಕೆ ನಮಗೆ ಕಂಡುಬರುತ್ತದೆ ಎಂದು ಶ್ಲಾಘೀಸಿದರು.ಇಂತಹ ಶಿಕ್ಷಕರಿಂದ ಈ ಶಾಲೆಯು ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಅಲ್ಲದೇ, ರಾಜ್ಯದಲ್ಲೇ ಹಸಿರು ಶಾಲೆ ಎಂಬ ಪ್ರಶಸ್ತಿಯನ್ನು ಪಡೆದಿದೆ. ಶಿಕ್ಷಕರು ಕೂಡ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದರು.
ಶಿಕ್ಷಕ ಗೋಪಾಲ್ ನರಸಿಂಹೇಗೌಡರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಹೋದ್ಯೋಗಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಶಿಕ್ಷಣ ಸಮನ್ವಯ ಅಧಿಕಾರಿ ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ದಯಾನಂದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸ್ವಾಮಿ, ಮುಖ್ಯ ಶಿಕ್ಷಕ ಗೋಪಾಲ್, ಸಿ.ಆರ್.ಪಿ ಕೃಷ್ಣ, ಚಲುವರಾಜು, ತಿಮ್ಮಯ್ಯ, ಶಿವಶಂಕರ್, ನಾಗರಾಜು, ಸುಕನ್ಯ, ಆರಾಧ್ಯ, ಬಾಬು, ಗ್ರಾಮಸ್ಥರಾದ ಪುಟ್ಟೇಗೌಡ, ಶಿವಲಿಂಗೇಗೌಡ, ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.