ಹುಬ್ಬಳ್ಳಿ ಕಾ ರಾಜಾ, ಮಹಾರಾಜರಿಗೆ ವಿದಾಯ

| Published : Sep 18 2024, 01:55 AM IST / Updated: Sep 18 2024, 01:56 AM IST

ಸಾರಾಂಶ

ಬೆಳಗಾವಿ ಹೊರತುಪಡಿಸಿದರೆ ರಾಜ್ಯದಲ್ಲಿಯೇ ಎತ್ತರದ ಆಕರ್ಷಣೀಯ ಪ್ರಮುಖ ಗಜಕಾಯದ ಗಣೇಶ ಮೂರ್ತಿಗಳೆಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 25 ಅಡಿ ಎತ್ತರದ "ಹುಬ್ಬಳ್ಳಿ ಕಾ ಮಹಾರಾಜಾ " ಹಾಗೂ ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 23 ಅಡಿ ಎತ್ತರದ "ಹುಬ್ಬಳ್ಳಿ ಕಾ ರಾಜಾ " ಸೇರಿದಂತೆ ಪ್ರಮುಖ ಗಣಪನಿಗೆ ಸಂಭ್ರಮದಿಂದ ವಿದಾಯ ಹೇಳಲಾಯಿತು.

ಹುಬ್ಬಳ್ಳಿ:

ಕಳೆದ 11 ದಿನ ಹು-ಧಾ ಮಹಾನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ 105 ಗಣೇಶ ಮೂರ್ತಿಗಳನ್ನು ಮಂಗಳವಾರ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.

ಮಹಾನಗರದಲ್ಲಿ ವಿವಿಧೆಡೆ ಗಜಾನನ ಮಂಡಳಗಳಿಂದ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮಂಗಳವಾರ ಶೃಂಗರಿಸಿದ ವಾಹನಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಗಣಪನಿಗೆ ಆರತಿ ಬೆಳಗಿ, ನೈವೇದ್ಯ ಅರ್ಪಿಸಿ ತಮ್ಮ ಹರಕೆ ಸಮರ್ಪಿಸಿದರು.

ಕುಣಿದು ಕುಪ್ಪಳಿಸಿದ ಜನತೆ:

ಮೆರವಣಿಗೆಯಲ್ಲಿ ಪಾಲ್ಗೊಂಡ ಸಹಸ್ರಾರು ಜನರು ಡಿಜೆ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದರು. ಇದರೊಂದಿಗೆ ಡೊಳ್ಳು, ಝಾಂಜ್ ಮೇಳ, ಬ್ಯಾಂಡ್, ಭಜನಾ ಮೇಳ, ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.

ಹುಬ್ಬಳ್ಳಿಯ ರಾಜ, ಮಹಾರಾಜನಿಗೆ ವಿದಾಯ:

ಬೆಳಗಾವಿ ಹೊರತುಪಡಿಸಿದರೆ ರಾಜ್ಯದಲ್ಲಿಯೇ ಎತ್ತರದ ಆಕರ್ಷಣೀಯ ಪ್ರಮುಖ ಗಜಕಾಯದ ಗಣೇಶ ಮೂರ್ತಿಗಳೆಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 25 ಅಡಿ ಎತ್ತರದ "ಹುಬ್ಬಳ್ಳಿ ಕಾ ಮಹಾರಾಜಾ " ಹಾಗೂ ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 23 ಅಡಿ ಎತ್ತರದ "ಹುಬ್ಬಳ್ಳಿ ಕಾ ರಾಜಾ " ಸೇರಿದಂತೆ ಪ್ರಮುಖ ಗಣಪನಿಗೆ ಸಂಭ್ರಮದಿಂದ ವಿದಾಯ ಹೇಳಲಾಯಿತು.

ದುರ್ಗದಬೈಲ್‌ ಹಾಗೂ ಮರಾಠಾಗಲ್ಲಿಯಿಂದ ಆರಂಭವಾದ ವಿಸರ್ಜನಾ ಮೆರವಣಿಗೆಯು ಮೇದಾರ ಓಣಿ, ದಾಜಿಬಾನಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ಚೆನ್ನಮ್ಮ ವೃತ್ತ, ಬಸವವನ ಮುಖಾಂತರ ಇಂದಿರಾ ಗಾಜಿನಮನೆ ಆವರಣದಲ್ಲಿರುವ ಶ್ರೀಗಣೇಶ ಬಾವಿ ಹಾಗೂ ಹೊಸೂರಿನಲ್ಲಿರುವ ಶ್ರೀ ಗಣೇಶ ಬಾವಿಯಲ್ಲಿ ವಿಸರ್ಜಿಸಲಾಯಿತು.

ಅದೇ ರೀತಿ ದುರ್ಗದ ಬೈಲ್, ಸ್ಟೇಷನ್ ರೋಡ್, ದಾಜಿಬಾನ್ ಪೇಟೆ, ಕೋಯಿನ್ ರೋಡ್, ಕೇಶ್ವಾಪುರ, ವಿದ್ಯಾನಗರ, ಗೋಕುಲ ರೋಡ್ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಿದ್ದ 105 ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.

3500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ:

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ 3500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಮಹಾನಗರದಲ್ಲಿ 50ಕ್ಕೂ ಹೆಚ್ಚು ಅತಿ ಸೂಕ್ಷ್ಮ ಪ್ರದೇಶ ಗುರುತಿಸಿ ಸಿಸಿ ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಸಾರ್ವಜನಿಕ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ಮಾರ್ಗ ಬದಲಾವಣೆ:

ಮೆರವಣಿಗೆ ಹಿನ್ನೆಲೆ ಮಂಗಳವಾರ ಮಧ್ಯಾಹ್ನದಿಂದ ನಗರಕ್ಕೆ ಬರುವ ಸಾರಿಗೆ ಮತ್ತು ಖಾಸಗಿ ಬಸ್‌ಗಳ ಮಾರ್ಗ ಸಂಚಾರದಲ್ಲಿ ಬದಲಾವಣೆ ಮಾಡಲಾಯಿತು. ಮಧ್ಯಾಹ್ನ 2ರಿಂದ ಮಧ್ಯರಾತ್ರಿ 1ರ ವರೆಗೆ ಮಾರ್ಗ ಬದಲಾಯಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ನಗರದ ಹೊಸೂರು ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರವಿಲ್ಲದೇ ಪ್ರಯಾಣಿಕರು ಆಟೋ, ಟಂಟಂಗಳ ಮೂಲಕ ನಗರದ ಹೊರಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದ ತಾತ್ಕಾಲಿಕ ಬಸ್‌ ನಿಲ್ದಾಣಕ್ಕೆ ತೆರಳಿ ತಮ್ಮ ಊರು ತಲುಪಿದರು. ಹು-ಧಾ ಬಿಆರ್‌ಟಿಎಸ್‌ ಬಸ್‌ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಯಿತು. ಹಳೇ ಬಸ್‌ ನಿಲ್ದಾಣ, ರೈಲು ನಿಲ್ದಾಣದ ವರೆಗೆ ಸಂಚರಿಸುತ್ತಿದ್ದ ಚಿಗರಿ ಬಸ್‌ನ್ನು ಕೆಎಂಸಿಆರ್‌ಐ ವೃತ್ತದ ವರೆಗೆ ಮಾತ್ರ ನಿಲುಗಡೆ ವ್ಯವಸ್ಥೆ ಮಾಡಲಾಯಿತು.

ಹುಬ್ಬಳ್ಳಿಯ ಕೆಎಂಸಿಆರ್‌ಐ, ಇಂಡಿಪಂಪ್‌ ವೃತ್ತ, ರೈಲು ನಿಲ್ದಾಣದ ಬಳಿ ಇರುವ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತ, ಸರ್ವೋದಯ ವೃತ್ತ, ಬಂಕಾಪುರ ಚೌಕ್ ಸೇರಿದಂತೆ ಹಲವು ವೃತ್ತಗಳಲ್ಲಿ ಸಾರಿಗೆ ಸೇರಿದಂತೆ ಲಘು ವಾಹನಗಳ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯಿಂದಾಗಿ ಜನತೆ ಸಂಕಷ್ಟ ಅನುಭವಿಸುವಂತಾಯಿತು.