ಸಾರಾಂಶ
ಕುವೈತ್ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವಿಗೀಡಾಗಿದ್ದ ಸರಸಂಬಾ ನಿವಾಸಿ, ಕನ್ನಡಿಗ, ವಾಹನ ಚಾಲಕ ವಿಜಯಕುಮಾರ ಪ್ರಸನ್ನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶನಿವಾರ ಅವರ ಸ್ವಂತ ಊರಾದ ಆಳಂದ ತಾಲೂಕಿನ ಸರಸಂಬಾದಲ್ಲಿ ಶನಿವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ/ಆಳಂದ
ಇದೇ ಜೂ.12ರಂದು ಕುವೈತ್ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವಿಗೀಡಾಗಿದ್ದ ಸರಸಂಬಾ ನಿವಾಸಿ, ಕನ್ನಡಿಗ, ವಾಹನ ಚಾಲಕ ವಿಜಯಕುಮಾರ ಪ್ರಸನ್ನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶನಿವಾರ ಅವರ ಸ್ವಂತ ಊರಾದ ಆಳಂದ ತಾಲೂಕಿನ ಸರಸಂಬಾದಲ್ಲಿ ಶನಿವಾರ ನಡೆಯಿತು.ಶನಿವಾರ ಬೆಳಗಿನ ಜಾವ ಜಿಲ್ಲಾಡಳಿತ ಮೂಲಕ ಕುಟುಂಬಸ್ಥರಿಗೆ ವಿಜಯಕುಮಾರ್ ಪಾರ್ಥಿವ ಶರೀರ ಹಸ್ತಾಂತರಿಸಿದ ಬಳಿಕ ಸ್ವಗ್ರಾಮ ಸರಸಂಬಾದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನುಮ್, ಸಹಾಯಕ ಆಯುಕ್ತರು, ತಹಸೀಲ್ದಾರ ಪ್ರಕಾಶ ಹೊಸಮನಿ, ಬಂಧು ಬಾಂಧವರು ಮತ್ತು ಗ್ರಾಮಸ್ಥರು ಸೇರಿದಂತೆ ನೂರಾರು ಜನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರಲ್ಲದೆ ಮೃತನ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಿದರು.ಮೂವರು ಮಕ್ಕಳು ಸ್ವಗ್ರಾಮ ಸರಸಂಬಾದ ಖಾಸಗಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಕುಟುಂಬವು ವಿಜಯಕುಮಾರ ದುಡಿಮೆಯ ಮೇಲೆಯೇ ಅವಲಂಬಿತವಾಗಿತ್ತು. ವಿಜಯ ಸಾವು ಕುಟುಂಬಕ್ಕೆ ಸಮಸ್ಯೆಗಳ ಸುಳಿಗೆ ತಳ್ಳಿದೆ.
ಅಗ್ನಿದುರಂತದಲ್ಲಿ ವಿಜಯಕುಮಾರ ಸಾವಿಗೀಡಾದ ಬಗ್ಗೆ ಕುಟುಂಬದ ಹಿರಿಯಣ್ಣನಿಗೆ ಮಾತ್ರ ಸುದ್ದಿ ತಿಳಿಸಲಾಗಿತ್ತು. ಕುಟುಂಬಸ್ಥರಿಗೆ ಆರಂಭದಲ್ಲಿ ಮೃತರ ಸಾವಿನ ಸುದ್ದಿಯನ್ನು ಮಾಹಿತಿ ನೀಡುವ ಧೈರ್ಯ ಯಾರೂ ಮಾಡಿರಲಿಲ್ಲ. ಸುದ್ದಿ ತಿಳಿದು ಮಾದನಹಿಪ್ಪರಗಾ ಪಿಎಸ್‍ಐ ಮತ್ತು ಕಂದಾಯ ನಿರೀಕ್ಷಕರು ಶುಕ್ರವಾರ ಸಂಜೆ ಮನೆಗೆ ಬಂದಾಗ ಕುಟುಂಬಸ್ಥರಿಗೆ ಆಗ ವಿಜಯಕುಮಾರನ ಸಾವಿನ ಬಗ್ಗೆ ಮಾಹಿತಿ ಸಿಕ್ಕಿತು. ಮಗನ ಕಳೆದುಕೊಂಡ ತಂದೆ, ತಾಯಿ ಪತ್ನಿ ಶಶಿಕಲಾ ಮತ್ತು ಮೂವರು ಮಕ್ಕಳ ಸೇರಿದಂತೆ ಬಂಧು ಬಾಂಧವರು ಕಣ್ಣೀರಾದರು.ಮೃತ ವಿಜಯಕುಮಾರ ಪ್ರಸನ್ನ ವಾಹನ ಚಾಲಕರಾಗಿ ಕುವೈತನಲ್ಲಿ 2015ರಲ್ಲಿ ಮೊದಲು ಬಾರಿಗೆ ಕೆಲಸಕ್ಕೆ ಹೋಗಿದ್ದನು. ಕೋವಿಡ್ ವೇಳೆ ಸ್ವಗ್ರಾಮ ಸರಸಂಬಾಕ್ಕೆ ವಾಪಸ್ ಆಗಿದ್ದು, ಮತ್ತೆ 2022ರಲ್ಲಿ ಕುವೈತ್‍ಗೆ ಹೋಗಿದ್ದು, ಅಲ್ಲಿ ವಾಹನ ಚಾಲನೆಗೆ 35 ಸಾವಿರ ಸಂಬಳದಲ್ಲಿ ದುಡಿಯುತ್ತಿದ್ದರು. 2025ರ ಜೂನ್11ಕ್ಕೆ ಅವರ ಗುತ್ತಿಗೆ ಅವಧಿ ಮುಗಿಯುತ್ತಿತ್ತು. ಆದರೆ, ವಿಧಿಯ ಅಟಹಾಸವೆನ್ನುವಂತೆ 2024 ರ ಜೂನ್ 12ರಂದು ಆತನ ಸಾವು ಸಂಭವಿಸಿದೆ.