ಸಾರಾಂಶ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಶೀರ್ಷಿಕೆಯಡಿ ‘ಕರ್ನಾಟಕ ಸಂಭ್ರಮ-50’ ಜ್ಯೋತಿ ರಥಯಾತ್ರೆಯನ್ನು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಟ್ಟರು.
ಚಾಮರಾಜನಗರ: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಶೀರ್ಷಿಕೆಯಡಿ ‘ಕರ್ನಾಟಕ ಸಂಭ್ರಮ-50’ ಜ್ಯೋತಿ ರಥಯಾತ್ರೆಯನ್ನು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಟ್ಟರು. ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ‘ಕರ್ನಾಟಕ ಸಂಭ್ರಮ-50’ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ 4 ದಿನಗಳ ಕಾಲ ಸಂಚರಿಸುತ್ತಿದ್ದು, ಚಾಮರಾಜನಗರ ತಾಲೂಕಿನಿಂದ ಗುಂಡ್ಲುಪೇಟೆಗೆ ತೆರಳುತ್ತಿರುವ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಕನ್ನಡ ಬಾವುಟ ತೋರುವ ಮೂಲಕ ರಥಯಾತ್ರೆಗೆ ಬೀಳ್ಕೊಡುಗೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರಿಂದ ಮರುನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ -50 ಜ್ಯೋತಿ ರಥಯಾತ್ರೆ ಆರಂಭಿಸಿದೆ. ನಾವೆಲ್ಲಾ ಕನ್ನಡಿಗರು. ಕನ್ನಡ ಭಾಷೆ, ನೆಲ, ಜಲ ಉಳಿಸಿ, ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರಿಗೂ ಕರ್ನಾಟಕ ಸಂಭ್ರಮದ ಶುಭಾಷಯಗಳು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಗಿರಿಜಾ, ತಾಪಂ ಇಒ ಪೂರ್ಣಿಮಾ, ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಋಗ್ವೇದಿ, ಕಂದಾಯ ಇಲಾಖೆಯ ಮಹೇಶ್, ರಾಜೇಶ್, ಕನ್ನಡಪರ ಸಂಘಟನೆಗಳ ಮುಖಂಡರು, ಇದೇ ಸಂದರ್ಭದಲ್ಲಿ ಇದ್ದರು.