ಸಾರಾಂಶ
ಕುಷ್ಟಗಿ: ಅಂಜನಾದ್ರಿಯಿಂದ ಅಯೋಧ್ಯೆವರೆಗೂ ಸೈಕಲ್ ಮೂಲಕ ಜಾಥಾ ಆರಂಭಿಸಿರುವ ರಾಮಭಕ್ತ, ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ತಾಳೆವಾಡದ ಸುರೇಶ ಕೋಟಗೋಂಡ ಅವರನ್ನು ಪಟ್ಟಣದ ನಿವಾಸಿಗಳು ಸನ್ಮಾನಿಸಿ, ಬೀಳ್ಕೊಟ್ಟರು.ರಾಮ, ಆಂಜನೇಯನ ಭಕ್ತ ಕುಷ್ಟಗಿ ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ಪಟ್ಟಣದ ನಿವಾಸಿಗಳು ಯುವಕನನ್ನು ನವಲಳ್ಳಿ ದುರ್ಗಾದೇವಿ ದೇವಾಲಯದಲ್ಲಿ ಸನ್ಮಾನಿಸಿ ಗೌರವಿಸಿದರು.
ಈತ ಪಟ್ಟಣದ ಭಾಗ್ಯದ ಆಂಜನೇಯಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಶ್ರೀರಾಮನ ಭಾವಚಿತ್ರ ಬಿಡಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಿಡಶೇಸಿಯ ಶ್ರೀಗಳು ಅವರನ್ನು ಸನ್ಮಾನಿಸಿ, ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.
ಪ್ರಯಾಣ: ಕುಷ್ಟಗಿ ಪಟ್ಟಣದಿಂದ ಇಲಕಲ್, ಹುನಗುಂದ, ಬಾಗೇವಾಡಿ ಮುಖಾಂತರ ಅವರ ಸ್ವಗ್ರಾಮ ತಾಳವಾಡ ಮಾರ್ಗವಾಗಿ ಕಲಬುರಗಿ, ಬಸವಕಲ್ಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಪ್ರವೇಶಿಸಿ ರಾಮಜನ್ಮಭೂಮಿ ಅಯೋಧ್ಯೆಯನ್ನು ತಲುಪುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಚಂದ್ರು ಪಾಟೀಲ, ಮಂಜುನಾಥ ಚಟ್ಟೇರ್ ಹಾಗೂ ವಿಜಯ ಚಟ್ಟೇರ್, ಪುರಸಭೆಯ ಸದಸ್ಯ ಬಸವರಾಜ್ ಬಡಕುಂಟಿ ಇದ್ದರು.