ಸಾರಾಂಶ
ಉತ್ತಮ ಪ್ರೀತಿ ವಾತ್ಸಲ್ಯದಿಂದ ಕಾಣುತ್ತ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿರಾಜಪೇಟೆ ಚಿಕ್ಕಪೇಟೆಯಲ್ಲಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಬಿ.ಎಸ್.ಲಾಲ್ ಕುಮಾರ್ ಅವರು 30 ವರ್ಷಗಳ ಸುದೀರ್ಘ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಶಾಲೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.ಜಯಪ್ರಕಾಶ್ ನಾರಾಯಣ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ತ್ರಿಶೂಗಣಪತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಲಾಲ್ ಕುಮಾರ್ ಅವರು ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಉತ್ತಮ ಪ್ರೀತಿ ವಾತ್ಸಲ್ಯದಿಂದ ಕಾಣುತ್ತ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ಲಾಲ್ ಕುಮಾರ್ ಅವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಈ ಅನುದಾನಿತ ಶಾಲೆಗೆ 2021- 22 ರಲ್ಲಿ ಸ್ವಚ್ಛ ವಿದ್ಯಾಲಯ ಎಂಬ ಪುರಸ್ಕಾರ ದೊರಕಿದ್ದು, ನಿವೃತ್ತ ಶಿಕ್ಷಕ ಲಾಲ್ ಕುಮಾರ್ ಅವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯವಾಗಿತ್ತು ಎಂದು ಶ್ಲಾಘಿಸಿದರು.ನಿವೃತ್ತರಾದ ಮುಖ್ಯ ಶಿಕ್ಷಕ ಬಿ.ಎಸ್.ಲಾಲ್ ಕುಮಾರ್ ಹಾಗೂ ಗೀತಾ ಲಾಲ್ ಕುಮಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವಿಕರಿಸಿದ ಲಾಲ್‌ಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಾಗಿಬಂದ ಹಾದಿಯ ಬಗ್ಗೆ ನೆನಪಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಎ.ಉತ್ತಪ್ಪ, ಆಶಾ ಸುಬ್ಬಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ , ಸಂಪನ್ಮೂಲ ವ್ಯಕ್ತಿ ಕೆ.ಸಿ.ಗೀತಾಂಜಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗಾಯತ್ರಿ, ಹಳೆ ವಿದ್ಯಾರ್ಥಿ ನೀತು ಉಪಸ್ಥಿತರಿದ್ದು ಮಾತನಾಡಿದರು.ಮುಖ್ಯ ಶಿಕ್ಷಕ ರಾಜೇಗೌಡ ಸ್ವಾಗತಿಸಿದರು. ಶಿಕ್ಷಕಿ ಕವಿತಾ ನಿರೂಪಿಸಿದರು. ನಂದೀಶ್ ವಂದಿಸಿದರು.