ಸಾರಾಂಶ
ಕಲಬುರಗಿ : ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮೂಲಕ ಬಿಸಿಲೂರಿನ ಮದನ್ ಮೋಹನ್ ಮಾಳವಿಯಾ ಎಂದೇ ಖ್ಯಾತರಾಗಿದ್ದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ (90) ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ವೀರಶೈವ ಧರ್ಮದ ವಿಧಿ ವಿಧಾನದಂತೆ ಶುಕ್ರವಾರ ಸಂಜೆ ನೆರವೇರಿತು.
ಗುರುವಾರ ಲಿಂಗೈಕ್ಯರಾದ ಕಲಬುರಗಿಯ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ಅನುಭವ ಮಂಟಪದಿಂದ ಗೋಧೂಳಿ ಮುಹೂರ್ತದಲ್ಲಿ ಪೂಜ್ಯರ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿರಿಸಿ ಶರಣಬಸವೇಶ್ವರ ದೇವಸ್ಥಾನವನ್ನು 5 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರ ಜೈಘೋಷ ಮುಗಿಲು ಮುಟ್ಟಿತ್ತು.
ಬಳಿಕ ದೇಗುಲದ ಮುಂಭಾದಲ್ಲಿರುವ ಅವರ ತಂದೆ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಗದ್ದುಗೆಯ ಪಕ್ಕದಲ್ಲೇ ವೀರಶೈವ ಸಂಪ್ರದಾಯದಂತೆ ನಿರ್ಮಿಸಲಾಗಿದ್ದ ಸಮಾಧಿಯಲ್ಲಿ ಶರೀರವನ್ನು ಕುಳ್ಳಿರಿಸಿ, ಪಂಚಾಚಾರ್ಯರ ಕಳಸ ಸ್ಥಾಪಿಸಿ ಪೂಜಾ ಕೈಂಕರ್ಯ ನಡೆಸಲಾಯಿತು. ಬೆಳಗುಂಪಿಯ ಪರ್ವತೇಶ್ವರ ಶಿವಾಚಾರ್ಯರು ಹಾಗೂ ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಪೂಜ್ಯರ ಪುತ್ರ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪೂಜೆ ನೆರವೇರಿಸಿದರು. ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ಕ್ರಿಯಾಗಟ್ಟಿ ವಿಭೂತಿ ಬಳಸಲಾಯಿತು. ಗುರುವಿನ ಪಾದೋದಕ ಅರ್ಪಣೆಯೊಂದಿಗೆ ಅಂತಿಮ ಸಮಾಧಿ ಮಾಡಲಾಯಿತು. ಈ ವೇಳೆ ಅಲ್ಲಿ ನೆರೆದಿದ್ದ ಸ್ವಾಮೀಜಿಗಳು, ಶಾಸ್ತ್ರೀಗಳು ವೇದಗಳ ಸ್ತೋತ್ರ ಹಾಗೂ ವಚನಗಳನ್ನು ಪಠಿಸಿದರು.
3 ಸುತ್ತು ಕುಶಾಲ ತೋಪು :ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸರು 3 ಬಾರಿ ಕುಶಾಲು ತೋಪು ಹಾರಿಸಿ ತ್ರಿವಿಧ ದಾಸೋಹಿ ಡಾ.ಶರಣಬಸವಪ್ಪ ಅಪ್ಪ ಅವರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರದ ಪರವಾಗಿ ಗೌರವ ಸಲ್ಲಿಸಿ, ಶರೀರದ ಮೇಲೆ ಹಾಕಲಾಗಿದ್ದ ರಾಷ್ಟ್ರಧ್ವಜವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಶರಣಬಸವಪ್ಪ ಅಪ್ಪ ಅವರ ಧರ್ಮಪತ್ನಿ ಡಾ.ಮಾತೋಶ್ರೀ ದಾಕ್ಷಾಯಿಣಿ ಅವ್ವ, ಪುತ್ರಿಯರು, ಗುರು-ವಿರಕ್ತ ಪರಂಪರೆಯ ಹಲವಾರು ಮಠಾಧೀಶರು, ಭಕ್ತರು ತ್ರಿವಿಧ ದಾಸೋಹಿಗೆ ಅಂತಿಮ ನಮನ ಸಲ್ಲಿಸಿದರು.
ಭಾಗಿಯಾದ ಗಣ್ಯರು:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶರಣಬಸಪ್ಪಗೌಡ ದರ್ಶನಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರು, ರಾಜಕೀಯ ಗಣ್ಯರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಅಧಿಕಾರಿಗಳು ಭಾಗಿಯಾಗಿದ್ದರು.
9 ವರ್ಷದ ಪುತ್ರನಿಗೆ ಅಧಿಕಾರ ಹಸ್ತಾಂತರ
ಡಾ.ಶರಣಬಸವಪ್ಪ ಅಪ್ಪ ಅವರ ಶಿರದ ಮೇಲಿದ್ದ ಪೇಟವನ್ನು ಅವರ 9 ವರ್ಷದ ಪುತ್ರ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ತೊಡಿಸುವ ಮೂಲಕ ಕಲಬುರಗಿಯ ಮಹಾದಾಸೋಹ ಪೀಠದ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಶರೀರದ ಮೇಲಿದ್ದ ಕರಡಿಗೆ, ಹೂವಿನ ಹಾರವನ್ನು ಹಾರಕೂಡ ಮಠದ ಚೆನ್ನವೀರ ಶಿವಾಚಾರ್ಯರು ಅವರು ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಕೊರಳಿಗೆ ಹಾಕಿದರು. ಈ ಮೂಲಕ ಈವರೆಗೆ ಆಗಿರುವ ಪೀಠಾಧಿಪತಿಗಳಲ್ಲಿ ಚಿರಂಜೀವಿ ಅವರೇ ಅತಿ ಕಿರಿಯ ಪೀಠಾಧಿಪತಿ ಎಂಬ ಇತಿಹಾಸಕ್ಕೆ ಸಾಕ್ಷಿಯಾದರು.