ಶಿರಿಗೇರಿ ಗ್ರಾಮದಲ್ಲಿ ಶಿಕ್ಷಕಿ ರೇಣುಕಾ ವಿಜಾಪುರಗೆ ಬೀಳ್ಕೊಡುಗೆ

| Published : Jul 13 2025, 01:19 AM IST

ಶಿರಿಗೇರಿ ಗ್ರಾಮದಲ್ಲಿ ಶಿಕ್ಷಕಿ ರೇಣುಕಾ ವಿಜಾಪುರಗೆ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿರುಗುಪ್ಪ ತಾಲೂಕಿನ ಶಿರಿಗೇರಿ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ರೇಣುಕಾ ಎಂ. ವಿಜಾಪುರ ಅವರಿಗೆ ಶಾಲೆಯ ಮೈದಾನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಿರುಗುಪ್ಪ: ತಾಲೂಕಿನ ಶಿರಿಗೇರಿ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ರೇಣುಕಾ ಎಂ. ವಿಜಾಪುರ ಅವರಿಗೆ ಶಾಲೆಯ ಮೈದಾನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗ್ರಾಮದ ಗಣ್ಯರು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ನಿವೃತ್ತ ಶಿಕ್ಷಕಿಯರು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು, ಶಿರಿಗೇರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅಪಾರವಾಗಿ ಶ್ರಮಿಸಿದ ಶಿಕ್ಷಕಿ ರೇಣುಕಾ ಎಂ. ವಿಜಾಪುರ ಅವರ ವಿದ್ಯಾರ್ಥಿಪರ ಕಾಳಜಿ ಸ್ಮರಿಸಿದರು.

ಒಂದು ದಿನವೂ ಶಾಲೆ ತಪ್ಪಿಸದೆ ನಿಗದಿತ ಸಮಯಕ್ಕೆ ಬರುತ್ತಿದ್ದ ಶಿಕ್ಷಕಿ ರೇಣುಕಾ ಎಂ. ವಿಜಾಪುರ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಅನಾರೋಗ್ಯವಿದ್ದರೂ ಶಾಲೆಗೆ ಬರುತ್ತಿದ್ದರು. ಅನಾರೋಗ್ಯವಿದೆ, ವಿಶ್ರಾಂತಿ ಪಡೆದುಕೊಳ್ಳಿ, ರಜೆ ಹಾಕಿ ಎಂದು ಜತೆಗಿದ್ದ ಶಿಕ್ಷಕಿಯರು ಸಲಹೆ ನೀಡಿದರೂ ಎಂದೂ ಶಾಲೆ ತಪ್ಪಿಸುತ್ತಿರಲಿಲ್ಲ. ಪಠ್ಯಗಳು ಹಿಂದುಳಿದರೆ ಮಕ್ಕಳ ಪರೀಕ್ಷೆಗೆ ಸಮಸ್ಯೆಯಾಗುತ್ತದೆ. ನಮ್ಮಿಂದ ಮಕ್ಕಳಿಗೆ ತೊಂದರೆಯಾಗಬಾರದು ಎನ್ನುತ್ತಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಬಗ್ಗೆ ಅಪಾರವಾಗಿ ಕಾಳಜಿಯುಳ್ಳವರಾಗಿದ್ದರಲ್ಲದೆ, ಮಕ್ಕಳಿಗೆ ಪಠ್ಯದ ಜತೆಗೆ ನೈತಿಕತೆಯ ಜೀವನ ಹಾಗೂ ಸಂಕಷ್ಟಗಳನ್ನು ಎದುರಿಸುವ ಬಗೆ ಮಕ್ಕಳಿಗೆ ತಿಳಿವಳಿಕೆ ನೀಡುತ್ತಿದ್ದರು. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಯಮದಿಂದಲೇ ಎದುರಿಸಬೇಕು ಎಂದು ಮನವರಿಕೆ ಮಾಡಿಕೊಡುತ್ತಿದ್ದರು ಎಂದು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ಮರಿಸಿಕೊಂಡರು.

ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಬೀಳ್ಕೊಡುಗೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ರೇಣುಕಾ ಎಂ. ವಿಜಾಪುರ ಅವರು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಈ ವರೆಗೆ ಸಲ್ಲಿಸಿದ ಶೈಕ್ಷಣಿಕ ಸೇವೆ, ಕುಟುಂಬ ಸದಸ್ಯರು ನೀಡಿದ ಸಹಕಾರ ಸ್ಮರಿಸಿಕೊಂಡರು. ಶಾಲೆಯ ಮುಖ್ಯಗುರು ಬಿ. ಮಂಜುಳಾ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಶಿವಪ್ಪ, ಮಾಜಿ ಅಧ್ಯಕ್ಷ ಎಸ್.ಎಂ. ನಾಗರಾಜಸ್ವಾಮಿ, ಸದಸ್ಯರಾದ ದಾನಪ್ಪ, ರೇಣುಕಾ ಎಂ. ವಿಜಾಪುರ ಅವರ ಪತಿ ಕೆ. ಗುರುಮೂರ್ತಿ, ಪುತ್ರಿಯರಾದ ಸೌಜನ್ಯಾ, ಚೈತನ್ಯ, ಲಾವಣ್ಯಾ, ಅಳಿಯ ಅವಿನಾಶ್ ಮತ್ತಿತರರಿದ್ದರು. ದೈಹಿಕ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಓಂಕಾರಗೌಡ ಕಾರ್ಯಕ್ರಮ ನಿರ್ವಹಿಸಿದರು.