ಜಿಲ್ಲಾಡಳಿತದಿಂದ ಎನ್‌ಡಿಆರ್‌ಎಫ್ ತಂಡಕ್ಕೆ ಬೀಳ್ಕೊಡುಗೆ
KannadaprabhaNewsNetwork | Published : Oct 12 2023, 12:00 AM IST
ಜಿಲ್ಲಾಡಳಿತದಿಂದ ಎನ್‌ಡಿಆರ್‌ಎಫ್ ತಂಡಕ್ಕೆ ಬೀಳ್ಕೊಡುಗೆ
ಸಾರಾಂಶ
ನಗರದ ಖಾಸಗಿ ಹೊಟೇಲ್‌ನಲ್ಲಿ 10 ನೇ ಬೆಟಾಲಿಯನ್‌ನ ಎನ್‌ಡಿಆರ್‌ಎಫ್ ತಂಡದ ಮುಖ್ಯಸ್ಥ ಶಾಂತಿಲಾಲ್ ಜಾಟಿಯಾ ಅವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶಾಲು, ಫಲ ತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ಮುಂಗಾರು ಸಂದರ್ಭದಲ್ಲಿ ಉಂಟಾಗಬಹುದಾಗಿದ್ದ ಪ್ರಾಕೃತಿಕ ವಿಕೋಪ ಎದುರಿಸಲು ಆಗಮಿಸಿದ್ದ ಎನ್‌ಡಿಆರ್‌ಎಫ್ ತಂಡಕ್ಕೆ ಜಿಲ್ಲಾಡಳಿತ ವತಿಯಿಂದ ಬುಧವಾರ ಬೀಳ್ಕೊಡಲಾಯಿತು. ನಗರದ ಖಾಸಗಿ ಹೊಟೇಲ್‌ನಲ್ಲಿ 10 ನೇ ಬೆಟಾಲಿಯನ್‌ನ ಎನ್‌ಡಿಆರ್‌ಎಫ್ ತಂಡದ ಮುಖ್ಯಸ್ಥ ಶಾಂತಿಲಾಲ್ ಜಾಟಿಯಾ ಅವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶಾಲು, ಫಲ ತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ ರಾಜಾ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 2018, 2019, 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಿನ್ನೆಲೆ, ಈ ಬಾರಿಯೂ ಸಹ ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು ಎಂದು ಹೇಳಿದರು. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಕೊಡಗು ವಿಶೇಷ ಜಿಲ್ಲೆಯಾಗಿದೆ. ಬರೆಕುಸಿತ, ಪ್ರವಾಹ ಉಂಟಾದ ಸಂದರ್ಭದಲ್ಲಿ ಹೇಗೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅಣಕು ಪ್ರದರ್ಶನವನ್ನು ಏರ್ಪಡಿಸಿ ಜಿಲ್ಲೆಯ ಜನತೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತ್ತು ಎಂದು ಹೇಳಿದರು. ಶಾಂತಿಲಾಲ್ ಜಾಟಿಯಾ ಅವರ ನೇತೃತ್ವದ ಎನ್‌ಡಿಆರ್‌ಎಫ್ ತಂಡ ಹಲವು ಕಾರ್ಯ ಚಟುವಟಿಕೆಗಳನ್ನು ಕೈಗೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ ಎದುರಿಸುವಲ್ಲಿ ಪ್ರತಿ ಹಂತದಲ್ಲಿಯೂ ಸಿದ್ಧತೆ ಅತ್ಯಗತ್ಯ. ಆ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್ ತಂಡ ತಮ್ಮದೇ ಕಾರ್ಯ ಚಟುವಟಿಕೆ ಕೈಗೊಂಡು ಜಿಲ್ಲೆಯ ಜನತೆಯಲ್ಲಿ ವಿಶ್ವಾಸ ಉಂಟುಮಾಡಿದೆ ಎಂದು ಹೇಳಿದರು. ಎನ್‌ಡಿಆರ್‌ಎಫ್ ತಂಡದ 10 ನೇ ಬ್ಯಾಟಾಲಿಯನ್ ಮುಖ್ಯಸ್ಥ ಶಾಂತಿಲಾಲ್ ಜಾಟಿಯಾಮಾತನಾಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೆ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಅಣಕು ಪ್ರದರ್ಶನ, ವಿವಿಧ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳು, 20 ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ, ಮೆಡಿಕಲ್ ಕಿಟ್ ವಿತರಣೆ, ವಿವಿಧ ಕಡೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಗಾಂಧಿ ಜಯಂತಿ ಪ್ರಯುಕ್ತ ನಗರಸಭೆಯೊಂದಿಗೆ ಶ್ರಮದಾನ ಕಾರ್ಯಕ್ರಮ, ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗಿತ್ತು ಎಂದು ವಿವರಿಸಿದರು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಮಾತನಾಡಿ ಎನ್‌ಡಿಆರ್‌ಎಫ್ ತಂಡದ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್‌ಡಿಆರ್‌ಎಫ್ ತಂಡದ ಜಿ.ಎಲ್.ಆಕರ್ಷ್ ಮಾತನಾಡಿ ಯಾವುದೇ ರೀತಿಯ ವಿಕೋಪಗಳು ಸಂಭವಿಸಿದ್ದಲ್ಲಿ ಎದುರಿಸುವುದು ಅತ್ಯಗತ್ಯವಾಗಿದೆ ಎಂದರು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್, ಡಿವೈಎಸ್‌ಪಿ ಜಗದೀಶ್, ಅನೂಪ್ ಮಾದಪ್ಪ, ಶಿರಸ್ತೇದಾರ್ ಪ್ರಕಾಶ್, ಎನ್‌ಡಿಆರ್‌ಎಫ್ ತಂಡದ ಪ್ರತಿನಿಧಿಗಳು ಇದ್ದರು.