ಸಾರಾಂಶ
ಬಳ್ಳಾರಿಯಲ್ಲಿ ಗಣೇಶಮೂರ್ತಿ ವಿಸರ್ಜನೆ ಸಡಗರ; ವಿಜೃಂಭಣಿಯ ಮೆರವಣಿಗೆ
ಕನ್ನಡಪ್ರಭ ವಾರ್ತೆ ಬಳ್ಳಾರಿನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗಳನ್ನು ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ವಿಸರ್ಜನೆಗೊಳಿಸಲಾಯಿತು.
ಬಳ್ಳಾರಿ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾನಾ ಬಗೆಯ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಐದು ದಿನಗಳ ಕಾಲ ವಿಶೇಷವಾಗಿ ಪೂಜಿಸಿ, ವಿಜೃಂಭಣಿಯ ಮೆರವಣಿಗೆಯಿಂದ ವಿಸರ್ಜನೆಗೊಳಿಸಲಾಯಿತು.ಬಳ್ಳಾರಿ ನಗರದಲ್ಲಿ ಭಾನುವಾರ ರಾತ್ರಿ 500ಕ್ಕೂ ಅಧಿಕ ಮಣ್ಣಿನ ಗಣಪನ ಮೂರ್ತಿಗಳು ವಿಸರ್ಜನೆಗೊಂಡವು.
ಸಂಜೆ ಶುರುಗೊಂಡ ಜಿಟಿಜಿಟಿ ಮಳೆಯ ನಡುವೆ ಭಕ್ತರು ಗಣಪನ ವಿಸರ್ಜನೆ ಕಾರ್ಯದ ಮೆರವಣಿಗೆಯಲ್ಲಿ ಸಂಭ್ರಮದ ಹೆಜ್ಜೆ ಹಾಕಿದರು. ಹತ್ತಾರು ಕಡೆಯಿಂದ ಗಣೇಶ ಮೂರ್ತಿಗಳು ವಿಸರ್ಜನೆಗೆ ಬಂದಿದ್ದರಿಂದ ನಗರದ ಪ್ರಮುಖ ಬೀದಿಗಳು ಧ್ವನಿವರ್ಧಕಗಳು, ಪಟಾಕಿಗಳ ಭಾರೀ ಸಿಡಿತದ ಸದ್ದು ಎಲ್ಲೆಡೆ ಹರಡಿಕೊಂಡಂತೆ ಕಂಡು ಬಂತು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಕರು ಗಣೇಶನಿಗೆ ಜಯಕಾರ ಹಾಕುತ್ತಲೇ ವಿಸರ್ಜನಾ ಜಾಗದ ಕಡೆ ಸಾಗಿ ಬಂದರು. ಕಪ್ಪಗಲ್ ರಸ್ತೆ, ತಾಳೂರು ರಸ್ತೆ, ಸಿರುಗುಪ್ಪ ರಸ್ತೆ, ಭತ್ರಿ ಪ್ರದೇಶ, ಅಲ್ಲೀಪುರ, ಆಲ್ದಳ್ಳಿ, ಬೆಂಗಳೂರು ರಸ್ತೆ ಪ್ರದೇಶದಲ್ಲಿ ಬರುವ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆಗೊಳಿಸಲಾಯಿತು. ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಮಹಾನಗರ ಪಾಲಿಕೆಯಿಂದ ಮಾಡಿಕೊಳ್ಳಲಾಗಿತ್ತು.ಗಣೇಶ ಹಬ್ಬದ ಹಿನ್ನೆಲೆ ಬಳ್ಳಾರಿಯ ಅನೇಕ ಕಡೆಗಳಲ್ಲಿ ನೃತ್ಯ, ಹಾಡುಗಾರಿಕೆ, ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ರಂಗೋಲಿ ಬಿಡಿಸುವ ಸ್ಪರ್ಧೆ, ಗಣಪನ ಚಿತ್ರಬಿಡಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಇಲ್ಲಿನ ಪಾರ್ವ ತಿನಗರದ 2ನೇ ಲಿಂಕ್ ರಸ್ತೆಯಲ್ಲಿ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯ ಸಂಜೆ, ಹೊನ್ನೂರಸ್ವಾಮಿ ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಕಾಳಿದಾಸ ತಂಡದಿಂದ ಮಾತನಾಡುವ ಗೊಂಬೆ, ಗಂಗಾವತಿ ಕಲಾವಿದರಿಂದ ಕನ್ನಡ ಗೀತೆಗಳ ಗಾಯನ ಹಾಗೂ ಸ್ಥಳೀಯ ಮಕ್ಕಳಿಂದ ಹಾಡು, ನೃತ್ಯ ಕಾರ್ಯಕ್ರಮಗಳು ಐದು ದಿನಗಳ ಕಾಲ ಜರುಗಿದವು. ಗಣೇಶೋತ್ಸವ ಅಂಗವಾಗಿ ನಗರದ ಅನೇಕ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದಲ್ಲಿ ಮೂರು, ಐದು, ಹನ್ನೊಂದು ಹಾಗೂ ಹದಿಮೂರು ದಿನಗಳ ಕಾಲ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ಐದನೇ ದಿನವಾದ ಭಾನುವಾರ ಭಾಗಶಃ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಬಳ್ಳಾರಿ ಜಿಲ್ಲೆಯಲ್ಲಿ 1891 ಕಡೆ ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ಗಣೇಶ ಉತ್ಸವ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಿತ್ತು.