ಶಶಿಕಾಂತ ಗುರೂಜಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕುಟುಂಬದ ಕುರಿತು ಆಕ್ರೋಶದಲ್ಲಿ ಮಾತನಾಡಿರುವುದಕ್ಕೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ವಿಷಾದ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ:
ಕಬ್ಬಿನ ಬೆಳೆಗೆ ಪ್ರತಿ ಟನ್‌ಗೆ ಕನಿಷ್ಠ ₹ 5500 ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬೃಹತ್ ಹೋರಾಟ ವೇಳೆ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕುಟುಂಬದ ಕುರಿತು ಆಕ್ರೋಶದಲ್ಲಿ ಮಾತನಾಡಿರುವುದಕ್ಕೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ವಿಷಾದ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಹುಬ್ಬಳ್ಳಿಯಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಪಕ್ಷಾತೀತವಾಗಿ ಲಕ್ಷಾಂತರ ರೈತರು ಭಾಗವಹಿಸಿದ್ದರು. ಬಿಸಿಲು ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಉಂಟಾದ ಆಕ್ರೋಶದಲ್ಲಿ ಶಶಿಕಾಂತ ಗುರೂಜಿ ಅವರು ಸಚಿವ ಜೋಶಿ ಅವರ ಕುಟುಂಬದ ಕುರಿತು ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಹ್ಲಾದ ಜೋಶಿ ಅವರ ತಾಯಿ ನಮ್ಮ ತಾಯಿಯಂತೆ. ಆಕ್ರೋಶದ ಸಂದರ್ಭದಲ್ಲಿ ಬಂದ ಮಾತುಗಳನ್ನು ಯಾರೂ ತಪ್ಪಾಗಿ ಭಾವಿಸಬಾರದು. ಜೋಶಿ ಅವರ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಯಾವುದೇ ಪಕ್ಷದವರು ಈ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.ರೈತರ ಹಿತಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಈ ಮಾತುಗಳು ಬಂದಿವೆ. ಕುಟುಂಬದ ವಿಚಾರವನ್ನು ಹೋರಾಟಕ್ಕೆ ತರುವುದು ಉದ್ದೇಶವಲ್ಲ. ಈ ಹಿನ್ನೆಲೆಯಲ್ಲಿ ಶಶಿಕಾಂತ ಗುರೂಜಿ ಅವರ ಪರವಾಗಿ ತಾವು ವಿಷಾದ ವ್ಯಕ್ತಪಡಿಸುತ್ತಿದ್ದು, ಯಾರೂ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಚೂನಪ್ಪ ಪೂಜೇರಿ ಹೇಳಿದ್ದಾರೆ.