ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಸ್ಪಂದಿಸಿ

| Published : Feb 14 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಿರಂತರ ಹವಾಮಾನ ವೈಪರೀತ್ಯ ಮುಂತಾದ ಸಮಸ್ಯೆಗಳಿಂದ ಆತನ ಬದುಕು ಸಂಕಷ್ಟದಲ್ಲಿದೆ. ಕಾರಣ ಕೃಷಿ ಪರಿಕರ ಮಾರಾಟಗಾರರು ಕಳಪೆ ಮಟ್ಟದ ಔಷಧ, ಬೀಜ, ಗೊಬ್ಬರಗಳನ್ನು ರೈತರಿಗೆ ನೀಡದೆ, ರೈತರ ಬದುಕು ಹಸನಾಗುವಂತೆ ತಾವೆಲ್ಲರೂ ಶ್ರಮಿಸಬೇಕು ಎಂದು ಧಾರವಾಡದ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಿರಂತರ ಹವಾಮಾನ ವೈಪರೀತ್ಯ ಮುಂತಾದ ಸಮಸ್ಯೆಗಳಿಂದ ಆತನ ಬದುಕು ಸಂಕಷ್ಟದಲ್ಲಿದೆ. ಕಾರಣ ಕೃಷಿ ಪರಿಕರ ಮಾರಾಟಗಾರರು ಕಳಪೆ ಮಟ್ಟದ ಔಷಧ, ಬೀಜ, ಗೊಬ್ಬರಗಳನ್ನು ರೈತರಿಗೆ ನೀಡದೆ, ರೈತರ ಬದುಕು ಹಸನಾಗುವಂತೆ ತಾವೆಲ್ಲರೂ ಶ್ರಮಿಸಬೇಕು ಎಂದು ಧಾರವಾಡದ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ನಗರದ ಹೊರವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರಗಳ ಅಡಿಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸ್‌ನ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಸಿ ಪದವಿಯನ್ನು ರೈತರ ಅಭ್ಯುದಯಕ್ಕಾಗಿ ಉಪಯೋಗಿಸಬೇಕು. ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಬರುವಂತೆ ಬೆಳೆಗಳನ್ನು ಬೆಳೆಯಲು ಸೂಕ್ತ ಸಲಹೆ ನೀಡಬೇಕು ಎಂದು ಹೇಳಿದರು.

ಎಲ್ಲ ಪರಿಕರ ಮಾರಾಟಗಾರರು ಸೂಕ್ತ ತಾಂತ್ರಿಕ ತಂತ್ರಜ್ಞಾನಗಳನ್ನು ರೈತರಿಗೆ ಒದಗಿಸಿ, ಹೆಚ್ಚಿನ ಲಾಭ ಪಡೆಯಲು ಸಹಕರಿಸಬೇಕಿದೆ. ರೈತರಿಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಮಾತನಾಡಿ, ಜಿಲ್ಲೆಯಲ್ಲಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುವುದರೊಂದಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಾರಣ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಹೊರೆಯಾಗದಂತೆ ಕೃಷಿ ಪರಿಕರ ಮಾರಾಟ ಮಾಡಬೇಕು ಮತ್ತು ತರಕಾರಿ ಬೆಳೆಯಲು ಮಹಿಳೆಯರಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.

ಕೃಷಿ ಜಂಟಿ ನಿರ್ದೇಶಕಿ ಡಾ.ರೂಪಾ.ಎಲ್ ಮಾತನಾಡಿ, ದೇಸಿ ಕೋರ್ಸ್‌ ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ಹೆಚ್ಚಿನ ವೈಜ್ಞಾನಿಕ ಜ್ಞಾನವನ್ನು ವಿವಿಧ ವಿಷಯಗಳಲ್ಲಿ ಪಡೆದಿರುವುದರಿಂದ ಅದರ ಸದುಪಯೋಗವನ್ನು ರೈತರಿಗೆ ಒದಗಿಸಬೇಕು ಹಾಗೂ ತಮ್ಮ ಆದಾಯ ಹೆಚ್ಚಿಸಲು ರೈತರಿಗೆ ಮೋಸ ಮಾಡದೆ ಪ್ರಾಮಾಣಿಕತೆಯಿಂದ ವ್ಯವಹಾರ ಮಾಡಬೇಕಿದೆ. ವಿಜಯಪುರ ಜಿಲ್ಲೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಗುಣಮಟ್ಟದ ಪರಿಕರಗಳನ್ನು ರೈತರಿಗೆ ಪೂರೈಸಿ, ಅವರ ಅಭಿವೃದ್ಧಿಗಾಗಿ ಶ್ರಮಿಸಬೇಕು ಹಾಗೂ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಔಷಧಿಗಳನ್ನು ಕಾನೂನಿನ ಅಡಿಯಲ್ಲಿ ಮಾರಾಟ ಮಾಡಿ ರೈತರ ಏಳಿಗೆಗಾಗಿ ತಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ವಿಸ್ತರಣಾ ನಿರ್ದೇಶಕ ಡಾ.ಆರ್.ಬಸವರಾಜಪ್ಪ ಮಾತನಾಡಿ, ದೇಸಿ ಕೋರ್ಸ್‌ನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ ಧಾರವಾಡ ವಿಸ್ತರಣಾ ನಿರ್ದೇಶನಾಲಯಕ್ಕೆ ಮ್ಯಾನೇಜ್ ಹೈದರಾಬಾದ ಸಂಸ್ಥೆಗೆ ಪ್ರಶಸ್ತಿ ಮುಡಿಗೇರಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಸಿ ಕೋರ್ಸ್‌ನ್ನು ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ಸಮಾನಾಂತರ ವಿಸ್ತರಣಾ ಕಾರ್ಯಕರ್ತರಾಗಿ ರೈತ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ದೇಸಿ ಸಂಯೋಜಕ ಡಾ.ಎಸ್.ಎನ್.ಜಾಧವ ಮಾತನಾಡಿದರು. ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಡಾ.ಎಸ್.ಎಸ್.ಕರಭಂಟನಾಳ, ಡಾ.ಎಸ್.ಎಂ.ವಸ್ತ್ರದ, ಡೀನ್ ಡಾ.ಅಶೋಕ ಎಸ್.ಸಜ್ಜನ, ಡಾ.ಸಿ.ಆರ್.ಪಾಟೀಲ, ಡಾ.ಜಿ.ಸೋಮನಗೌಡ, ಅರವಿಂದ ಕೌಲಗಿ, ಸತೀಶ ನಾಟಿಕಾರ, ಸಚಿನ್‌ ಬೈರಗೊಂಡ, ಮುತ್ತಣ್ಣ ಮಾಳಿ, ರಾಕೇಶ ತುಳಜನವರ, ಪ್ರಕಾಶ ಕುಂಬಾರ ಮುಂತಾದವರು ಇದ್ದರು.