ಸಾರಾಂಶ
ರಾಣಿಬೆನ್ನೂರು: ಕೃಷಿಯಲ್ಲಿ ರೈತರು ಆದಾಯಕ್ಕಿಂತ ಖರ್ಚು ಹೆಚ್ಚು ಮಾಡುತ್ತಾರೆ. ಹೀಗಾಗಿ ಕೃಷಿಯೇ ಬೇಡ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು ನಷ್ಟ ಅನುಭವಿಸುವ ಜತೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರಿಗೆಲ್ಲ ಅಪವಾದ ಎನ್ನುವಂತೆ ತಾಲೂಕಿನ ಅಸುಂಡಿ ಗ್ರಾಮದ ರೈತ ಮಹದೇವಪ್ಪ ನೆಗಳೂರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಹಜ ಕೃಷಿ ಅಳವಡಿಸಿಕೊಂಡು ಆದಾಯ ದ್ವಿಗುಣ ಮಾಡಿಕೊಂಡಿದ್ದಾರೆ.
ತಮ್ಮ ಜಮೀನಿನಲ್ಲಿ ಬೆಳೆದ ಬೀಜಗಳನ್ನೇ ಸಂಗ್ರಹಿಸಿ ಬಿತ್ತನೆ ಮಾಡಿದ್ದಾರೆ. ಮುಂಗಾರು ಬೆಳೆಗಳನ್ನು ಅಕ್ಕಡಿ ಸಾಲು ಪದ್ಧತಿಯಲ್ಲಿ ನಾಟಿ ಮಾಡಿದ್ದಾರೆ. ಮುಖ್ಯ ಬೆಳೆಯಾಗಿ ಬೆಳ್ಳುಳ್ಳಿ, ಈರುಳ್ಳಿ, ಹೆಸರು, ಅಲಸಂದೆ, ಉದ್ದು, ಅವರೆ ಬೆಳೆದಿದ್ದಾರೆ. ಇದರದೊಂದಿಗೆ ವಿವಿಧ ತರಕಾರಿ, ಸೊಪ್ಪುಗಳು, ಎಳ್ಳು, ಗುರೆಳ್ಳು, ಬಿಳಿಜೋಳ ಕೂಡ ಬೆಳೆದಿದ್ದಾರೆ.ತಮ್ಮ ಎರಡು ಎಕರೆಯಲ್ಲಿ 12 ವಿವಿಧ ಬೆಳೆ ಹಾಗೂ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. ಮಣ್ಣಿನಲ್ಲಿ ಸಾರಜನಕ, ರಂಜಕ, ಇಂಗಾಲದ ಮೂಲಕ ಭೂಮಿ ಫಲವತ್ತತೆಯನ್ನು ಎರಡು ವರ್ಷದಿಂದ ಹೆಚ್ಚಿಸಿಕೊಂಡಿದ್ದಾರೆ. ಈಗ ಉತ್ತಮ ಆದಾಯ ತರುವ ಬೆಳೆ ಬೆಳೆದು ಮಾದರಿ ರೈತರಾಗಿದ್ದಾರೆ. ಯಾವುದೇ ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸದೆ ಖರ್ಚು ಕಡಿಮೆ ಮಾಡಲು ಎರೆಹುಳು ತೊಟ್ಟಿ ಮಾಡಿ, ಅದರಿಂದ 60- 70 ಚೀಲ ಗೊಬ್ಬರ ಮಾಡಿಕೊಂಡಿದ್ದಾರೆ.
ಕೊಟ್ಟಿಗೆ ಗೊಬ್ಬರ, ಜೀವಾಮೃತ, ಜೈವಿಕ ಕೀಟನಾಶಕಗಳನ್ನು ಬಳಸಿ ಯಾವುದೇ ರೀತಿ ಹೆಚ್ಚಿನ ಖರ್ಚು ಮಾಡದೇ ನೇರ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ಮಾರಿಕೊಳ್ಳುತ್ತಾರೆ. ಪ್ರತಿ ವಾರ ಅವರು 200 ತೆಂಗು, ಮೂರೂವರೆ ಕ್ವಿಂಟಲ್ ಒಣ ಕೊಬ್ಬರಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ.ಏನಿದು ಸಹಜ ಕೃಷಿ?: ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೇ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳನ್ನು ಬೆಳೆಯುವ ಒಂದು ಪದ್ಧತಿಯಾಗಿದೆ. ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ.
ನಾನು ಕೃಷಿಯಲ್ಲಿ ಪರಿವರ್ತನೆ ಮಾಡಲು ರಾಣಿಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೂಕ್ತ ಮಾರ್ಗದರ್ಶನ ನೀಡಿದೆ. ರೈತರು ಏಕಬೆಳೆ ಪದ್ಧತಿಯಾಗಿ ಗೋವಿನ ಜೋಳ ಒಂದನ್ನೇ ಹಾಕದೆ ಸಮಗ್ರ ಸಾವಯವ ಹಾಗೂ ಪರಿಸರಸ್ನೇಹಿ ಕೃಷಿ ಕಡೆಗೆ ಒಲವು ಹೆಚ್ಚಿಸಿಕೊಳ್ಳುವಂತೆ ಗಮನ ಹರಿಸಬೇಕು. ಇದರಿಂದ ನನ್ನಂತೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ರೈತ ಮಹದೇವಪ್ಪ ನೆಗಳೂರ ತಿಳಿಸಿದರು.