Farmer awareness campaign from Feb. 7th by Kuraburu Shanthakumar

- ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತರ ಯಾತ್ರೆ । ಎಂಎಸ್‌ಪಿ ನಿಗದಿಗೆ ಆಗ್ರಹಿಸಿ 40 ದಿನಗಳ ಯಾತ್ರೆ: ಫೆ.19 ರಂದು ಪ್ರಧಾನಿಗೆ ಮನವಿ

---

ಕನ್ನಡಪ್ರಭ ವಾರ್ತೆ ಯಾದಗಿರಿ

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ವರ್ಷಾನುಕಾಲ ರೈತರು ಚಳವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರೂ ಗಂಭೀರ ಕ್ರಮ ಜಾರಿಯಾಗಿಲ್ಲ. ಆದ್ದರಿಂದ ರೈತರಲ್ಲಿ ಜಾಗೃತಿ ಮೂಡಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿದೆ. ದೇಶದ ರೈತರಿಗೆ ಎಂಎಸ್ಪಿ ಖಾತರಿ ಕಾನೂನು ಇಲ್ಲದ ಕಾರಣ ವರ್ಷಕ್ಕೆ 15ಲಕ್ಷ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಫೆಬ್ರವರಿ 7 ತಾರೀಖಿನಿಂದ ರೈತ ಜಾಗೃತಿ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ, ಕೇರಳ ಪಾಂಡಿಚರಿ, ತಮಿಳುನಾಡು ಮುಖಾಂತರ ಕರ್ನಾಟಕಕ್ಕೆ ಹಾದು ಹೋಗಿ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಯಾತ್ರೆ ಸಾಗಲಿದೆ ಎಂದರು.

ಈ ಮಾರ್ಗದಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಮಾರ್ಚ್ 19ರಂದು ಪ್ರಧಾನಿಯವರಿಗೆ ಸಲ್ಲಿಸಲಾಗುವುದು. 40 ದಿನಗಳ ಈ ಯಾತ್ರೆ ಕಾಶ್ಮೀರ ತಲುಪಿ, ನಂತರ ದೆಹಲಿಯಲ್ಲಿ ಮಾರ್ಚ್ 19 ರಂದು ರಾಮ್ ಲೀಲಾ ಮೈದಾನದಲ್ಲಿ ದೇಶದ ಎಲ್ಲ ರೈತರ ಬೃಹತ್ ಸಮಾವೇಶ ನಡೆಸಲಾಗುತ್ತದೆ. ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್‌ ವಿವರಿಸಿದರು.

ಫೆಬ್ರವರಿ 10 ಚಾಮರಾಜನಗರಕ್ಕೆ, 11 ರಂದು ಮೈಸೂರಿಗೆ, ಮಂಡ್ಯ ಹಾಗೂ ರಾಮನಗರಕ್ಕೆ ಬರಲಿದೆ, 12ರಂದು ಬೆಂಗಳೂರು ಚಿಕ್ಕಬಳ್ಳಾಪುರ ಮೂಲಕ ಆಂಧ್ರಕ್ಕೆ ಹೋಗಲಿದೆ. ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳ ಮುಖಂಡರು ಸ್ವಯಂ ಪ್ರೇರಿತವಾಗಿ ಬೆಂಬಲಿಸಿ ನಿಮ್ಮ ನಿಮ್ಮ ಭಾಗದಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿದ ಪತ್ರವನ್ನು ಯಾತ್ರೆಯ ಮುಖಂಡರಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಜಿಲ್ಲಾ ಸಂಚಾಲಕರಾದ ಶಿವಶರಣಪ್ಪ, ರೈತ ಮುಖಂಡ ಎಲ್ಲಪ್ಪ ಮಲ್ಲಿಬಾವಿ. ಕೊಟ್ರೇಶ್ ಚೌಧರಿ. ಬಸವರೆಡ್ಡಿ ಪಾಟೀಲ್, ಬಸವರಾಜ್ ದಳಪತಿ. ವೆಂಕಟರಾಮರೆಡ್ಡಿ, ಚಂದ್ರಶೇಖರ್ ಸಾಹುಕಾರ್, ದೇವೇಂದ್ರಪ್ಪ ಚಂದಲಾಪುರ್, ಅಶೋಕ್ ಚೌಧರಿ. ಚಾಂದ್ ಹುಸೇನ್, ಚನ್ನಬಲಾಪುರ, ಶ್ಯಾಮಪ್ಪ ಚಂಡಿಕೆರಿ, ಹನುಮಂತ ವೆಂಕಟಾಪುರ. ಕೊಟ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

-

...ಕೋಟ್‌..

ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ 131 ದಿನ ಉಪವಾಸ ಸತ್ಯಾಗ್ರಹ ನಡೆಸಿದಾಗ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಮಸ್ಯೆ ಪರಿಹಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದರು. ಈ ಸಮಿತಿ ರೈತರ ಪರ ಎಂಎಸ್‌ಪಿ ಖಾತ್ರಿ ಕಾಯ್ದೆ ಅವಶ್ಯಕತೆ ಎಂದು ತಿಳಿಸಿದೆ .

ಕೇಂದ್ರ ಸರ್ಕಾರದ ಕೃಷಿ ಅಧ್ಯಯನದ 31 ಜನರ ಸಂಸದೀಯ ಸಮಿತಿ ಸಹ ರೈತರ ಪರ ವರದಿ ನೀಡಿ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿಗೆ ಬೆಂಬಲಿಸಿದೆ ಇದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಹೋರಾಟದ ಫಲವಾಗಿ ಆದ ಸಾಧನೆ. ಆದರೆ, ಕೇಂದ್ರ ಸರ್ಕಾರ ಇದರ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ.

- ಕುರುಬೂರು ಶಾಂತಕುಮಾರ್‌, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ.31ವೈಡಿಆರ್1

ಯಾದಗಿರಿ ಪ್ರವಾಸಿ ಮಂದಿರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಲ್ಲಪ್ಪ ನಾಯಕ ಗೌರವಾಧ್ಯಕ್ಷ ಶಿವ ಶರಣಪ್ಪ ಅಯ್ಯಲ ಪ್ರಧಾನ ಕಾರ್ಯದರ್ಶಿಯಾಗಿ ಬಸವರೆಡ್ಡಿ ಪಾಟೀಲ್. ಜಿಲ್ಲಾ ಸಂಚಾಲಕರಾಗಿ ಬಸವರಾಜ್ ದಳಪತಿ ಅವರನ್ನು ಆಯ್ಕೆ ಮಾಡಲಾಯಿತು.