ಗುಡಿಸಲುಕೊಪ್ಪ ಗ್ರಾಮದಲ್ಲಿ ರೈತ ಆತ್ಮಹತ್ಯೆ

| Published : Aug 11 2025, 12:31 AM IST

ಸಾರಾಂಶ

ಮೃತ ರೈತರನ್ನು ಗುಡಿಸಲುಕೊಪ್ಪದ ಗಣೇಶ ಯಲ್ಲಪ್ಪ ಹೊರಗಿನಮನಿ (28) ಎಂದು ಗುರುತಿಸಲಾಗಿದೆ.

ಗುತ್ತಲ: ಸಮೀಪದ ಗುಡಿಸಲುಕೊಪ್ಪ ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ಮೃತ ರೈತರನ್ನು ಗುಡಿಸಲುಕೊಪ್ಪದ ಗಣೇಶ ಯಲ್ಲಪ್ಪ ಹೊರಗಿನಮನಿ (28) ಎಂದು ಗುರುತಿಸಲಾಗಿದೆ.

ಅವರು ಆ. 8ರಂದು ಸಮೀಪದ ವರದಾ ನದಿಗೆ ಹಾರಿದ್ದರು. ಮೃತದೇಹ ಭಾನುವಾರ ಬೆಳಗ್ಗೆ 8 ಗಂಟೆಗೆ ನೀರಲಗಿ ಗ್ರಾಮದ ಬಳಿ ಪತ್ತೆಯಾಗಿದೆ. ಅವರಿಗೆ 3 ಎಕರೆ ಜಮೀನಿತ್ತು. ನೆಗಳೂರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ₹3 ಲಕ್ಷ, ಲಕ್ಷ್ಮೇಶ್ವರದ ಗ್ರಾಮೀಣ ಕೂಟ ಫೈನಾನ್ಸ್‌ನಲ್ಲಿ ₹55 ಸಾವಿರ ಹಾಗೂ ಚಿನ್ನದ ಸಾಲ ₹40 ಸಾವಿರ ಮಾಡಿದ್ದರು. ಸಾಲಬಾಧೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಲಕ್ಷ್ಮೀ ಹೊರಗಿನಮನಿ ದೂರು ನೀಡಿದ್ದಾರೆ.

ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ನಿಯಂತ್ರಣ ತಪ್ಪಿ ದೇಗುಲಕ್ಕೆ ನುಗ್ಗಿದ ಕಾರು, ದೇವರಿಗೆ ನಮಿಸುತ್ತಿದ್ದ ವ್ಯಕ್ತಿ ಸಾವು

ಬ್ಯಾಡಗಿ: ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿ ದೇವಸ್ಥಾನದೊಳಗೆ ನುಗ್ಗಿದ್ದು, ಈ ವೇಳೆ ದೇಗುಲದಲ್ಲಿ ದೇವರಿಗೆ ಕೈಮುಗಿದು ನಿಂತಿದ್ದ ವ್ಯಕ್ತಿ ಸಾವಿಗೀಡಾದ ಘಟನೆ ತಾಲೂಕಿನ ಹಳೇಗುಂಗರಗೊಪ್ಪ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದಿದೆ.ಮೃತರನ್ನು ಅದೇ ಗ್ರಾಮದ ನಾಗಪ್ಪ ನಿಂಗಪ್ಪ ಕನಕಾಪುರ (65) ಎಂದು ಗುರುತಿಸಲಾಗಿದೆ.ಅವರು ದೇವಸ್ಥಾನದಲ್ಲಿ ದೇವರಿಗೆ ಕೈಮುಗಿದು ನಿಂತಿದ್ದರು. ಆಗ ಅದೇ ದೇಗುಲದಲ್ಲಿ ಪೂಜೆ ಮುಗಿಸಿಕೊಂಡ ಅದೇ ಗ್ರಾಮದ ಸಂತೋಷ ಗಿಡ್ಡಣ್ಣನವರ ಅವರ ಕಾರು ನಿಯಂತ್ರಣ ತಪ್ಪಿ ದೇವಸ್ಥಾನದೊಳಕ್ಕೆ ನುಗ್ಗಿದೆ. ದೇಗುಲದಲ್ಲಿ ದೇವರಿಗೆ ನಮಿಸುತ್ತಿದ್ದ ನಾಗಪ್ಪ ಕನಕಾಪುರ ಎಂಬವರಿಗೆ ಡಿಕ್ಕಿಯಾಗಿದೆ. ಕೂಡಲೇ ಅವರನ್ನು ಬ್ಯಾಡಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವಿಗೀಡಾಗಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.