ಸಾರಾಂಶ
ರಾಣಿಬೆನ್ನೂರು: ಸಾಲಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ನಗರದ ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಗ್ರಾಮದ ಹನುಮಂತಪ್ಪ ತಿರುಕಪ್ಪ ಯಲ್ಲಕ್ಕನವರ (65) ಮೃತ ರೈತ.
ಇವರು ಗ್ರಾಮೀಣ ಕೂಟದ ಫೈನಾನ್‌ನಲ್ಲಿ ಪತ್ನಿ ಹೆಸರಿನಲ್ಲಿ ₹50 ಸಾವಿರ, ತನ್ನ ಹೆಸರಿನಲ್ಲಿ ಇಟಗಿ ಗ್ರಾಮದ ಸೊಸೈಟಿಯಲ್ಲಿ ₹80 ಸಾವಿರ ಸಾಲ ಮಾಡಿದ್ದರು. 3 ಎಕರೆ ಜಮೀನು ಹೊಂದಿದ್ದು, ಹಾಕಿದ ಬೆಳೆ ಸರಿಯಾಗಿ ಬಾರದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶವವಿಟ್ಟು ಪ್ರತಿಭಟನೆ: ಸರ್ಕಾರ ರೈತಾಪಿ ವರ್ಗದ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ರೈತ ಆತ್ಮಹತ್ಯೆ ಪ್ರಕರಣಗಳಿಗೆ ₹25 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರ ಎದುರು ರೈತನ ಶವವಿಟ್ಟು ಕೆಲಹೊತ್ತು ಪ್ರತಿಭಟನೆ ನಡೆಸಿದರು.ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಪ್ರತಿ ಜೀವಿಗೆ ಅನ್ನ ನೀಡುವ ರೈತನ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಸರ್ಕಾರಗಳು ಮಾಡುತ್ತಿದ್ದು, ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ಕಡೆಗಣಿಸುತ್ತಿವೆ ಎಂದರು.ರೈತ ಮುಖಂಡರಾದ ಬಸವರಾಜ ಯಲ್ಲಕ್ಕನವರ, ಯಲ್ಲಪ್ಪ ಓಲೇಕಾರ, ಮಲ್ಲಪ್ಪ ಲಿಂಗದಹಳ್ಳಿ, ಧರ್ಮರಾಜ ಕುಪ್ಪೇಲೂರ, ಬಿ.ಡಿ. ಸವಣೂರು, ನಾಗನಗೌಡ ಪಾಟೀಲ, ಉಮೇಶ ಉದಗಟ್ಟಿ, ಅನೀಲ ಮುಷ್ಟೂರನಾಯಕ, ಶ್ರೀನಿವಾಸರಡ್ಡಿ ಬಳ್ಳಾರಿ ಸೇರಿದಂತೆ ಮತ್ತಿತರು ಇದ್ದರು.ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಹಾವೇರಿ: ಸಾಲಬಾಧೆ ತಾಳಲಾರದೇ ರೈತರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ಸಂಗೂರ ಗ್ರಾಮದಲ್ಲಿ ನಡೆದಿದೆ.ಪುಟ್ಟಪ್ಪ ನಾಗಪ್ಪ ಕ್ಷೌರದ (37) ಎಂಬವರೇ ಮೃತಪಟ್ಟ ರೈತ. ಕೃಷಿ ಕೆಲಸಕ್ಕೆಂದು ಸಂಗೂರಿನ ಕೆವಿಜಿ ಬ್ಯಾಂಕಿನಲ್ಲಿ ₹2 ಲಕ್ಷ ಸಾಲ ಪಡೆದಿದ್ದರು. ಅತಿವೃಷ್ಟಿ, ಅನಾವೃಷ್ಟಿಯಿಂದ ಕಳೆದ ಬಾರಿ ಸರಿಯಾಗಿ ಉತ್ಪನ್ನ ಬಂದಿರಲಿಲ್ಲ. ಸಾಲವನ್ನು ಹೇಗೆ ತೀರಿಸುವುದು ಎಂದು ಚಿಂತೆಗೀಡಾಗಿದ್ದರು. ಇದೇ ಚಿಂತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ನೇತ್ರಾ ಕ್ಷೌರದ ದೂರಿನಲ್ಲಿ ತಿಳಿಸಿದ್ದಾರೆ.ಹಾವೇರಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಲ್ಲಿಯ ಮೆಡಿಕಲ್ ಕಾಲೇಜಿನಲ್ಲಿ 2ನೇ ವರ್ಷದ ಎಂಬಿಬಿಎಸ್ ಓದುತ್ತಿರುವ ರಾಜಸ್ಥಾನ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್‌ನ ಮೊದಲ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಅವರ ಕಾಲಿಗೆ ಗಾಯವಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಅವರು ಬರುತ್ತಿದ್ದಾರೆ ಎಂದು ಹಿಮ್ಸ್ ನಿರ್ದೇಶಕ ಪ್ರದೀಪಕುಮಾರ ಎಂ.ವಿ. ತಿಳಿಸಿದ್ದಾರೆ.