ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿಸಾಲ ಮರಳಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿ, ಪುತ್ರನೊಂದಿಗೆ ತನ್ನನ್ನು ಅನ್ನ, ನೀರು ನೀಡದೇ ಸಾಲ ನೀಡಿದ ಮಹಿಳೆಯು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.ಇಸ್ಲಾಂಪೂರ ಗ್ರಾಮದ ರಾಜು ಖೋತಗಿ (51) ಆತ್ಮಹತ್ಯೆ ಮಾಡಿಕೊಂಡ ರೈತ. ಅದೇ ಗ್ರಾಮದ ಸಿದ್ದವ್ವ ಬಯ್ಯನ್ನವರ ಸಾಲ ನೀಡಿದ ಮಹಿಳೆಯಾಗಿದ್ದು, ರೈತ ರಾಜುವಿನ ಪತ್ನಿ ದುರ್ಗವ್ವ ಖೋತಗಿ ಹಾಗೂ ಪುತ್ರ ಬಸವರಾಜ ಖೋತಗಿಯನ್ನು ಗೃಹಬಂಧನದಲ್ಲಿಟ್ಟದ್ದಳು.ಏನಿದು ಘಟನೆ?:
ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಬಿತ್ತಿದ ಬೆಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ರೈತ ರಾಜು ಖೋತಗಿ ಅದೇ ಗ್ರಾಮದ ಸಿದ್ದವ್ವ ಬಯ್ಯನ್ನವರ ಬಳಿ ಜೀವನ ನಿರ್ವಹಣೆಗೆಂದು ಕಳೆದ 5 ತಿಂಗಳ ಹಿಂದೆಯಷ್ಟೆ ₹1.5 ಲಕ್ಷ ಸಾಲ ಪಡೆದಿದ್ದ. ಸಾಲಕ್ಕೆ ಶೇ.೧೦ರಷ್ಟು ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದ. ಆದರೆ, ಕಳೆದೆರಡು ದಿನಗಳ ಹಿಂದೆ ಆಕಸ್ಮಿಕವಾಗಿ ಬಂದ ಸಿದ್ದವ್ವ ನೀಡಿದ್ದ ಸಾಲವನ್ನು ಮರಳಿಸುವಂತೆ ಎಚ್ಚರಿಕೆ ನೀಡಿದ್ದಳು.ಆದರೆ, ಸಾಲ ಮರಳಿಸಲು ಕಾಲಾವಕಾಶ ನೀಡುವಂತೆ ರಾಜು ಕೇಳಿದ್ದ. ಇದಕ್ಕೆ ರಾಜಿ ಆಗದೇ ಸಿದ್ದವ್ವ ಸಾಲ ಮರಳಿಸುವವರೆಗೂ ಪುತ್ರ ಬಸವರಾಜ ಖೋತಗಿಯನ್ನು ನನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಬೆದರಿಕ ಹಾಕಿದ್ದಾಳೆ. ನಂತರ ಪುತ್ರನನ್ನು ಆಕೆ ಗೃಹಬಂಧನದಲ್ಲಿಟ್ಟಿದ್ದಾಳೆ. ಹೀಗಾಗಿ ಸಿದ್ದವ್ವಳ ಮನೆಗೆ ರಾಜು ಮತ್ತು ದುರ್ಗವ್ವ ಹೋಗಿದ್ದಾರೆ. ಈ ವೇಳೆ ಬಸವರಾಜುವಿನ ಜತೆಗೆ ರಾಜು ಖೋತಗಿ ಹಾಗೂ ಪತ್ನಿ ದುರ್ಗವ್ವಳನ್ನು ಮನೆಯಲ್ಲಿ ಕೂಡಿ ಹಾಕಿ ಶಿಕ್ಷೆ ವಿಧಿಸಿದ್ದಾಳೆ. ಅಲ್ಲದೆ, ಮೂವರಿಗೂ ಹನಿ ನೀರು, ಅನ್ನ ನೀಡದೇ ಎರಡು ದಿನಗಳ ಕಾಲ ಗೃಹಬಂಧನದಲ್ಲಿಟ್ಟಿದ್ದಾಳೆ.ಈ ಘಟನೆಯಿಂದ ನೊಂದ ತಂದೆ ರಾಜು ಖೋತಗಿ ಮನೆಗೆ ಬಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ತೀವ್ರ ಅಸ್ವಸ್ಥನಾದ ರೈತನನ್ನು ಯಮಕನಮರಡಿಯ ರಾಜೀವ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಮಧ್ಯಾಹ್ನ 3 ಗಂಟೆಗೆ ರೈತ ಮೃತನಾಗಿದ್ದಾನೆ.ದುರ್ಗವ್ವ ತನಗಾದ ಅನ್ಯಾಯದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸಂಜೆಯವರೆಗೂ ಸತಾಯಿಸಿದ ಪೊಲೀಸರು ಸೋಮವಾರ ಸಂಜೆ ದುರ್ಬಲ ಸೆಕ್ಷನ್ ಅಡಿಯಲ್ಲಿ ಯಮಕನಮರಡಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಪತಿಯನ್ನು ಕಳೆದುಕೊಂಡ ದುರ್ಗವ್ವ ಗಂಭೀರ ಆರೋಪ ಮಾಡಿದ್ದಾಳೆ. ಘಟನೆ ಸೋಮವಾರ ನಡೆದಿದ್ದು ಸಂಜೆ 7 ಗಂಟೆಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಯನ್ನು ಮಂಗಳವಾರ ಸಂಜೆಯವರೆಗೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇಸ್ಲಾಂಪುರದಲ್ಲಿ ನಡೆದ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ. ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ದೂರು ನೀಡಿದರೇ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸುತ್ತೇನೆ.
-ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು.ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಜು ಖೋತಗಿಯವರ ಪತ್ನಿ ದುರ್ಗವ್ವ ದೂರು ಕೊಟ್ಟಿದ್ದಾರೆ. ಅವರು ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಎರಡು ಚೆಕ್ ಪಡೆದು ಸಿದ್ದವ್ವ ಬಯ್ಯನ್ನವರ ಒಂದೂವರೆ ಲಕ್ಷ ಸಾಲ ಕೊಟ್ಟಿದ್ದರು. ಕೊಟ್ಟ ಸಾಲ ಮರಳಿಸಿ ಕೊಡಿ ಎಂದು ಸಿದ್ದವ್ವ ಹೇಳಿದ್ದರು. ಇದರಿಂದ ಮನನೊಂದು ರಾಜು ಖೋತಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜು ಪತ್ನಿ ದುರ್ಗವ್ವ ಹಾಗೂ ಮಗ ಬಸವರಾಜ ಗೃಹ ಬಂಧನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಗೃಹ ಬಂಧನದಲ್ಲಿಟ್ಟಿದ್ದರು ಎಂಬುದರ ಬಗ್ಗೆಯೂ ತನಿಖೆಯಿಂದ ತಿಳಿಯಲಿದೆ. ಪೊಲೀಸರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಆಗುತ್ತದೆ.- ಬಿ.ಎಸ್.ನೇಮಗೌಡ,
ಬೆಳಗಾವಿ ಪ್ರಭಾರ ಎಸ್ಪಿ