ರೈತ ಸಮುದಾಯ ಪಕ್ಷಾತೀತ ಸಂಘಟನೆ ಅಗತ್ಯ: ಮನು ಸೋಮಯ್ಯ

| Published : Nov 14 2024, 12:47 AM IST

ಸಾರಾಂಶ

ರೈತ ಸಮುದಾಯ ಪಕ್ಷಾತೀತ ಮತ್ತು ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಂಘಟಿತರಾಗದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಕಡ್ಯಮಾಡ ಮನು ಸೋಮಯ್ಯ ಹೇಳಿದರು. ಕೊಡಗು ಜಿಲ್ಲಾ ರೈತ ಸಂಘದ ರಚನೆ ಕುರಿತ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ರೈತ ಸಮುದಾಯ ಪಕ್ಷಾತೀತ ಮತ್ತು ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಂಘಟಿತರಾಗದ್ದಿದರೆ ನಮಗೆ ಉಳಿಗಾಲವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಡ್ಯಮಾಡ ಮನು ಸೋಮಯ್ಯ ಎಚ್ಚರಿಸಿದ್ದಾರೆ.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಿ.ಎಂ. ಗುಂಡುಗುಟ್ಟಿ ಜಿ.ಎಂ.ಮಂಜುನಾಥಯ್ಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ರಚನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವೇ ವರ್ಷಗಳ ಹಿಂದೆ ಕೊಡಗಿಗೆ ಬಂದ ಅಸ್ಸಾಂ ಕಾರ್ಮಿಕರು ಸಂಘಟಿತರಾಗುತ್ತಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವ ನನಗೆ ರೈತರ ಹೋರಾಟದ ಆಳ ಅಗಲದ ಅರಿವಿದೆ. ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ರೈತರು ಸಂಘಟನೆಯತ್ತ ಮನಸ್ಸು ಮಾಡಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ ಎಂದರು.

ಕೊಡಗು ಹೊರತುಪಡಿಸಿ ಇತರೆ ಎಲ್ಲ ಜಿಲ್ಲೆಗಳಲ್ಲಿ ರೈತರ ಕೃಷಿ ಉಪಯೋಗಕ್ಕಾಗಿ 10 ಎಚ್ ಪಿ ಪಂಪ್ ಸೆಟ್ ಬಳಕೆಗೆ ಉಚಿತ ವಿದ್ಯುತ್ ನೀಡಿದ್ದಾರೆ. ಇಲ್ಲಿ ಮೀಟರ್ ಅಳವಡಿಸಲು ಅವಕಾಶ ನೀಡಿದ್ದು ಮೊದಲ ತಪ್ಪು ಎಂದು ಹೇಳಿದ ಮನು ಸೋಮಯ್ಯ, ಮೀಟರ್ ಅಳವಡಿಕೆಯಿಂದ ಸಹಜವಾಗಿಯೇ ಮೀಟರ್ ರೀಡಿಂಗ್ ಮತ್ತು ಬಿಲ್ ಬರುವುದರಿಂದ ನಾವು ಗ್ರಾಹಕರಾಗುತ್ತೇವೆ. ಆಗ ಬಿಲ್ ಪಾವತಿಸದಿರಲು ಹೇಗೆ ಸಾಧ್ಯವೆಂದು ಅವರು ಪ್ರಶ್ನಿಸಿದರು. ಇದಕ್ಕೆ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಕಾರಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗಚೆಟ್ಟಿರ ಕ್ಲೈವ್ ಪೊನ್ನಪ್ಪ, ಸುಂಟಿಕೊಪ್ಪ ಹೋಬಳಿ ಸೇರಿದಂತೆ ಚೆಟ್ಟಳ್ಳಿ, ನಂಜರಾಯಪಟ್ಟಣ ಮತ್ತು ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿನ ರೈತರನ್ನು ಒಳಗೊಂಡು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ಘಟಕ ರಚನೆ ಮಾಡಬೇಕಿದೆ. ಅದಕ್ಕಾಗಿ ಈ ಸಭೆ ಕರೆಯಲಾಗಿದೆ. ಅತಿವೃಷ್ಟಿ, ಕಾರ್ಮಿಕರ ಕೊರತೆ, ಅಸ್ಸಾಂ ಕಾರ್ಮಿಕರಿಂದಾಗಿಜಾತ್ಯತೀತ ಮತ್ತು ಪಕ್ಷತೀತಾ ನೆಲೆಗಟ್ಟಿನಲ್ಲಿ ಸಂಘಟಿತರಾಗಬೇಕಿದೆ ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ಯ ಬೋಪಯ್ಯ ಮಾತನಾಡಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕ್ಲೈವ್ ಪೊನ್ನಪ್ಪ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು.

ರೈತ ಸಂಘದ ಪ್ರಮುಕರಾದ ಪೊನ್ನಂಪೇಟೆಯ ಮಂಜುನಾಥ್, ಅಜ್ಜಮಾಡ ಚಂಗಪ್ಪ, ಸಿದ್ದಾಪುರದ ಪೂಣ್ಣಚ್ಚ, ಹಿರಿಯ ಸಹಕಾರಿ ಮುಖಂಡ ಎಂ.ಎಂ. ಕೊಮಾರಪ್ಪ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಹಾಗೂ ಹೋಬಳಿ ವ್ಯಾಪ್ತಿಯ ಕೃಷಿಕರು ಇದ್ದರು.